ಬೆಂಗಳೂರು: ಉದ್ಯಮಿಯೊಬ್ಬರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಭೂಗತ ಪಾತಕಿ ಬನ್ನಂಜೆ ರಾಜ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಹೈಕೋರ್ಟ್ 15 ದಿನಗಳ ಪೆರೋಲ್ ನೀಡಿ ಬಿಡುಗಡೆಗೆ ಆದೇಶಿಸಿದೆ.
ಈ ಕುರಿತಂತೆ ಬನ್ನಂಜೆ ರಾಜ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ 15 ದಿನಗಳ ಪೆರೋಲ್ ಮಂಜೂರು ಮಾಡಿ ಆದೇಶಿಸಿದೆ. ಬನ್ನಂಜೆ ರಾಜ ಬಿಡುಗಡೆಯಾಗುವ ದಿನಕ್ಕೆ ಅನ್ವಯವಾಗುವಂತೆ ಕಠಿಣ ಷರತ್ತುಗಳನ್ನು ವಿಧಿಸಿರುವ ನ್ಯಾಯಪೀಠ, ರಾಜಗೆ ನಾಲ್ವರು ಪೊಲೀಸರನ್ನು ಒಳಗೊಂಡ ಬೆಂಗಾವಲು ವಾಹನ ಕಲ್ಪಿಸಿದ್ದು, ‘ಇದಕ್ಕೆ ತಗಲುವ ವೆಚ್ಚವನ್ನು ಬನ್ನಂಜೆ ರಾಜನೇ ಪಾವತಿಸಬೇಕು’ ಎಂದು ನಿರ್ದೇಶಿಸಿದೆ.
‘ನನ್ನ ತಂದೆ ಸುಂದರ ಶೆಟ್ಟಿಗಾರ್ (86) ಏ.28ರಂದು ನಿಧನರಾಗಿದ್ದು ಮಲ್ಪೆಯ ಅವರ ಅಂತಿಮ ವಿಧಿವಿಧಾನ ಪೂರೈಸುವ ಸಲುವಾಗಿ ಪೆರೋಲ್ ಮೇಲೆ ನನ್ನ ಬಿಡುಗಡೆಗೆ ಆದೇಶಿಸಬೇಕು’ ಎಂದು ರಾಜ ಕೋರಿದ್ದರು. ಬನ್ನಂಜೆ ರಾಜ ಪರ ಹೈಕೋರ್ಟ್ ವಕೀಲ ಸಿರಾಜುದ್ದೀನ್ ಅಹ್ಮದ್ ಮತ್ತು ಪ್ರಾಸಿಕ್ಯೂಷನ್ ಪರ ರಾಹುಲ್ ಕಾರ್ಯಪ್ಪ ಹಾಜರಿದ್ದರು.