ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಸುಬ್ರಹ್ಮಣ್ಯ ರೋಡ್ ನಡುವೆ ಪ್ಯಾಸೆಂಜರ್ ರೈಲು ಸಂಚಾರ ಏಪ್ರಿಲ್ 12ರಿಂದ ಪ್ರಾರಂಭವಾಗಲಿದೆ. ಏ.12ರಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಈ ರೈಲಿಗೆ ಚಾಲನೆ ನೀಡಲಿದ್ದಾರೆ.ಈ ಹಿಂದೆ ಕಬಕ ಪುತ್ತೂರಿನವರೆಗೆ ಮಾತ್ರ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರಸ್ತೆಗೆ ವಿಸ್ತರಿಸುವುದು ಬಹಳ ಹಿಂದಿನ ಬೇಡಿಕೆಯಾಗಿತ್ತು. ಈ ರೈಲು ನಿತ್ಯ ಕೆಲಸಕ್ಕಾಗಿ ಮಂಗಳೂರಿಗೆ ಬಂದು ಹೋಗುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಜೊತೆಗೆ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವವರಿಗೆ ಪ್ರಯೋಜನವಾಗಲಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರೈಲು ವಿಸ್ತರಣೆ ಕುರಿತು ಮಾಹಿತಿ ನೀಡಿದ್ದಾರೆ.
ಪ್ಯಾಸೆಂಜ್ ರೈಲಿನ ಹೊಸ ವೇಳಾಪಟ್ಟಿ ಇಂತಿದೆ: ಈ ರೈಲು ದೈನಂದಿನ ಮೂರು ಟ್ರಿಪ್ ಹೊಂದಿದ್ದು, ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 4 ಗಂಟೆಗೆ ಹೊರಟು ಸುಬ್ರಹ್ಮಣ್ಯ ರೋಡ್ ನಿಲ್ದಾಣವನ್ನು ಬೆಳಗ್ಗೆ 6.30ಕ್ಕೆ ತಲುಪುತ್ತದೆ. ಇಲ್ಲಿಂದ ಬೆಳಗ್ಗೆ 7 ಗಂಟೆಗೆ ಹೊರಟು ಬೆಳಗ್ಗೆ 9 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪುತ್ತದೆ. ಸಂಜೆ 5.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ರಾತ್ರಿ 8.10ಕ್ಕೆ ಸುಬ್ರಹ್ಮಣ್ಯ ತಲುಪಲಿದೆ.ಕಚೇರಿ ಮತ್ತು ನಿತ್ಯ ಕೆಲಸಗಳಿಗೆ ಮಂಗಳೂರಿಗೆ ಓಡಾಡುವ ಜನರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ರಚಿಸಲಾಗಿದೆ. ಮಂಗಳೂರು ಸೆಂಟ್ರಲ್ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಎಲ್ಲ ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆಯಿದೆ ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.