10 ವರ್ಷ ಕೆಲಸ ಮಾಡಿರುವ ನೌಕರರನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಆನಂದು ವರ್ಸಸ್ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ಧಾರವಾಡ ವಿಭಾಗೀಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಫೆಬ್ರವರಿ 20, 2025ರಂದು ಈ ಮಹತ್ವದ ತೀರ್ಪು ನೀಡಿದೆ.
ದೇಹದಲ್ಲಿ ಶಕ್ತಿ ಇದ್ದಾಗ ದುಡಿಸಿ ಇಳಿ ವಯಸ್ಸಿನಲ್ಲಿ ಕೈಬಿಟ್ಟರೆ ದಂಡ ವಿಧಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಆನಂದು ಮತ್ತು ಈಶ್ವರ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಸಾಕ್ಷರತಾ ಸಹಾಯಕರಾಗಿ ಅರ್ಜಿದಾರರು ಮುರು ದಶಕಗಳಿಂದ ದುಡಿಯುತ್ತಿದ್ದರು. ಆದರೆ, ಮೂರು ದಶಕಗಳಿಂದಲೂ ದಿನಗೂಲಿ ನೌಕರರಾಗಿಯೇ ಸೇವೆ ಸಲ್ಲಿಸುತ್ತಿದ್ದ ಅವರ ನೇಮಕಾತಿಯನ್ನು ಖಾಯಂಗೊಳಿಸಬೇಕು ಎಂದು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ತಾವು ಯುವಕರಾಗಿದ್ದ ಕಾಲದಿಂದ ದಿನಗೂಲಿ ನೌಕರರಾಗಿಯೇ ಸೇವೆ ಸಲ್ಲಿಸುತ್ತಿದ್ದೇವೆ. ಇದೀಗ ನಾವು ನಿವೃತ್ತ ಅಂಚಿನಲ್ಲಿ ಇದ್ದೇವೆ ಎಂದು ಅರ್ಜಿದಾರರು ನ್ಯಾಯಪೀಠದ ಮುಂದೆ ವಾದಿಸಿದ್ದರು. ಒಬ್ಬ ಅರ್ಜಿದಾರ 58 ವರ್ಷ ತಲುಪಿದ್ದು, 39 ವರ್ಷಗಳ ಸೇಎ ಸಲ್ಲಿಸಿದ್ದಾರೆ. ಇನ್ನೊಬ್ಬರು 32 ವರ್ಷ ಸೇವೆ ಸಲ್ಲಿಸಿದ್ದು ಇದೀಗ ಅವರ ಪ್ರಾಯ 54 ವರ್ಷಗಳಾಗಿವೆ.
ಯುವಕರಾಗಿದ್ದಾಗ ಭವಿಷ್ಯದ ಬಗ್ಗೆ ಚಿಂತಿಸದೆ ದುಡಿದಿರುವ ಈ ಇಬ್ಬರು ಅರ್ಜಿದಾರರು, ದಿನಗೂಲಿ ನೌಕರರಾಗಿಯೇ ಮೂರು ದಶಕಗಳನ್ನು ಕಳೆದಿದ್ದಾರೆ. ಇವರನ್ನು ಖಾಯಂ ಆಗಿ ನೇಮಕ ಮಾಡದಿದ್ದರೆ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಲಿ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸರ್ಕಾರಕ್ಕಾಗಿ ಸುದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿದ ದಿನಗೂಲಿ ನೌಕರರನ್ನು ತಮ್ಮ ಕೊನೆಯ ದಿನಗಳಲ್ಲಿ ಜೀವನೋಪಾಯಕ್ಕೆ ಅಲೆಯುವಂತೆ ಮಾಡಬಾರದು ಎಂದು ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪ್ರಕರಣದ ವಿವರ ಹೀಗಿದೆ…
ಉತ್ತರ ಕನ್ನಡ ಜಿಲ್ಲೆಯ ಆನಂದ್ ಎಂಬವರು 1986ರ ಆಗಸ್ಟ್‌ನಲ್ಲಿ ಕೆಲಸಕ್ಕೆ ಸೇರಿದರು. ಈಶ್ವರ್ ಎಂಬವರು 1993ಯಲ್ಲಿ ಕೆಲಸಕ್ಕೆ ಸೇರಿದರು. ಇವರಿಬ್ಬರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಿರಿಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದರು.
ದಿನಗೂಲಿ ಆಧಾರದಲ್ಲಿ ನೇಮಕಗೊಂಡ ಅವರನ್ನು 10 ವರ್ಷ ಸೇವಾವಧಿ ಪೂರೈಸಿದ ನಂತರವೂ ಕಾಯಂ ಮಾಡಿಕೊಳ್ಳಲು ಇಲಾಖೆ ನಿರಾಕರಿಸಿತ್ತು. ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಕೋರಿ ಹಲವು ಬಾರಿ ಅವರು ಮನವಿ ಸಲ್ಲಿಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ.
2023ರಲ್ಲಿ ಮನವಿ ಸಲ್ಲಿಸಿದಾಗ, ಸಹಾಯಕ ಕಾರ್ಯಕಾರಿ ಎಂಜಿನಿಯರ್ ಅವರು, ಅರ್ಜಿದಾರರು 30 ವರ್ಷಕ್ಕೂ ಅಧಿಕ ಸಮಯದಿಂದ ಸೇವೆ ಸಲ್ಲಿಸಿರುವ ಕಾರಣ ಅವರ ಸೇವೆಯನ್ನು ಖಾಯಂ ಮಾಡಬಹುದು ಎಂದು ಶಿಫಾರಸ್ಸು ಮಾಡಿದರು. ಆದರೆ, ಹಿರಿಯ ಅಧಿಕಾರಿಗಳು ಈ ಸಂಬಂಧ ಸೂಕ್ತ ಆದೇಶ ಹೊರಡಿಸದೆ ಇದ್ದ ಕಾರಣ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣ ಕೈಗೆತ್ತಿಕೊಂಡ ಕರ್ನಾಟಕ ಹೈಕೋರ್ಟ್ ದೂರಗಾಮಿ ಪರಿಣಾಮ ಬೀರುವ ಮಹತ್ವದ ತೀರ್ಪು ನೀಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.
ಪ್ರಕರಣ: ಆನಂದು ಮತ್ತೊಬ್ಬರು Vs ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಕರ್ನಾಟಕ ಹೈಕೋರ್ಟ್(ಧಾರವಾಡ ಪೀಠ) WP 100556/2024 Dated 20-02-2025