ನವದೆಹಲಿ: ಬೆಲೆ ಏರಿಕೆಯ ಬಿಸಿಯಲ್ಲಿರುವ ಮಧ್ಯಮ ವರ್ಗದವರಿಗೆ ಗಾಯದ ಮೇಲೆ ಬರೆ ಬೀಳುತ್ತಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಎರಡು ರೂಗಳಷ್ಟು ಹೆಚ್ಚಿಸಿದೆ. ಕರ್ನಾಟಕದ ಜನರಿಗೆ ಡಬಲ್ ಶಾಕ್ ಸಿಕ್ಕಂತಾಗಿದೆ. ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಡೀಸಲ್ ಮೇಲೆ ಎರಡು ರೂ ಹೆಚ್ಚುವರಿ ತೆರಿಗೆ ಹೇರಿತ್ತು. ಈಗ ಕೇಂದ್ರದಿಂದ ಎರಡು ರೂ ಅಬಕಾರಿ ಸುಂಕ ಹೆಚ್ಚಳ ಆಗಿದೆ.
ಪೆಟ್ರೋಲ್ ಮೇಲೆ ಅಬಕಾರಿ ಸುಂಕ ಒಂದು ಲೀಟರ್ಗೆ 11 ರೂ ಇದ್ದದ್ದು 13 ರೂಗೆ ಏರಿಕೆ ಆಗುತ್ತಿದೆ. ಡೀಸಲ್ ಮೇಲಿನ ಅಬಕಾರಿ ಸುಂಕವು ಪ್ರತೀ ಲೀಟರ್ಗೆ 10 ರೂಗೆ ಏರಿಕೆ ಆಗುತ್ತಿದೆ. ಆದರೆ, ಪೆಟ್ರೋಲ್ ಮತ್ತು ಡೀಸಲ್ನ ರೀಟೇಲ್ ಬೆಲೆಗಳಲ್ಲಿ ಹೆಚ್ಚಳ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಕೆ.
ಡೊನಾಲ್ಡ್ ಟ್ರಂಪ್ ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗುತ್ತಿದ್ದಂತೆ, ಇನ್ನೊಂದು ಕಡೆ ಕಚ್ಚಾ ತೈಲ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡಿದೆ.