ಮಾಜಿ ಗೆಳತಿಯ ಜೊತೆ ಗಂಡನ ಫೋಟೋ ನೋಡಿ ಉರಿದು ಹೋದ ಪತ್ನಿಯೊಬ್ಬಳು ಬಿಸಿ ಎಣ್ಣೆ ಕಾಯಿಸಿ ಗಂಡನ ಮರ್ಮಾಂಗಕ್ಕೆ ಎರಚಿದ್ದು, ಇದರಿಂದ ಗಂಡ ಗಂಭೀರ ಗಾಯಗೊಂಡಿದ್ದಾನೆ.
ದೇವರ ನಾಡು ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್‌ನಲ್ಲಿ ಈ ಘಟನೆ ನಡೆದಿದೆ. ಮೊಬೈಲ್ ಫೋನ್‌ನಲ್ಲಿ ಗಂಡ ಮಾಜಿ ಗರ್ಲ್‌ಫ್ರೆಂಡ್ ಜೊತೆ ಇರುವ ಫೋಟೋ ನೋಡಿದ ಪತ್ನಿಗೆ ಆತ ಆಕೆಯ ಜೊತೆ ಸಂಪರ್ಕದಲ್ಲಿದ್ದುಕೊಂಡು ತನಗೆ ಮೋಸ ಮಾಡುತ್ತಿದ್ದಾನೆ ಎಂಬ ಸಂಶಯದ ಜೊತೆಗೆ ಕೋಪವೂ ನೆತ್ತಿಗೇರಿದೆ. ಇದರಿಂದ ಗಂಡನಿಗೆ ಬುದ್ಧಿ ಕಲಿಸಲು ಮುಂದಾದ ಆಕೆ ಸೀದಾ ಹೋಗಿ ಗ್ಯಾಸ್‌ನಲ್ಲಿ ನೀರು ಮಿಶ್ರಿತ ಎಣ್ಣೆ ಬಿಸಿ ಮಾಡಿದ್ದು, ಬಳಿಕ ಗಂಡನ ಖಾಸಗಿ ಭಾಗಕ್ಕೆ ಎರಚಿದ್ದಾಳೆ. ಇದರಿಂದ ಗಂಡನ ಸ್ಥಿತಿ ಗಂಭೀರವಾಗಿದೆ. ಶೇ. 45ರಷ್ಟು ಸುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಬಿಸಿ ಎಣ್ಣೆ ಎರಚಿದ್ದರಿಂದ ಗಂಡನ ಎದೆ ಕೈಗಳು, ಮರ್ಮಾಂಗ ಹಾಗೂ ತೊಡೆಯಲ್ಲಿ ಸುಟ್ಟ ಗಾಯಗಳಾಗಿವೆ. ಕೂಡಲೇ ಆತನನ್ನು ಎರ್ನಾಕುಲಂನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾಗಿ ವರದಿಯಾಗಿದೆ. ಇತ್ತ ಪತಿ ಮೇಲೆ ಈ ರೀತಿಯಾಗಿ ಮಾರಣಾಂತಿಕವಾಗಿ ಕ್ರೌರ್ಯವೆಸಗಿದ ಪತ್ನಿಯ ವಿರುದ್ಧ ದೂರು ದಾಖಲಾಗಿದೆ.