ಗುಜರಾತ್ : ಖಾಸಗಿ ತರಬೇತಿ ವಿಮಾನ ಅಪಘಾತಕ್ಕೀಡಾಗಿ ಪೈಲಟ್ ಮೃತಪಟ್ಟ ಘಟನೆ ಗುಜರಾತ್‌ನ ಅಮೋಲಿ ಜಿಲ್ಲೆಯ ಶಾಸ್ತ್ರಿ ನಗರ ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದೆ.
ಅನಿಕೇತ್ ಮಹಾಜನ್ ಮೃತಪಟ್ಟ ಪೈಲಟ್.
ಖಾಸಗಿ ವಾಯುಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನ ಇಂದು ಮಧ್ಯಾಹ್ನ 12:30ರ ಸುಮಾರಿಗೆ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ತರಬೇತಿ ನಿರತ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಮೇಲಿ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಅಮೇಲಿ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗಿತ್ತು. ಅನಿಕೇತ್ ಮಹಾಜನ್ ಒಬ್ಬರೇ ಏಕಾಂಗಿಯಾಗಿ ಹಾರಾಟ ನಡೆಸುತ್ತಿದ್ದರು. ವಿಮಾನ ತೆರೆದ ಪ್ರದೇಶಕ್ಕೆ ಅಪ್ಪಳಿಸುವ ಮೊದಲು ಮರದ ಮೇಲೆ ಬಿದ್ದಿದ್ದು, ಬೆಂಕಿ ಹೊತ್ತಿಕೊಂಡಿದೆ. ಅಪಘಾತದಲ್ಲಿ ಬೇರೆ ಯಾರಿಗೂ ಗಾಯವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಈ ವಿಮಾನ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.