ಚಿತ್ರದುರ್ಗ: ಜನಸಾಮಾನ್ಯರಲ್ಲಿನ ಅಪೌಷ್ಠಿಕತೆ ಹೋಗಲಾಡಿಸಿ, ಆರೋಗ್ಯವಂತ ಸಮಾಜ ನಿರ್ಮಿಸುವ ಗುರಿಯೊಂದಿಗೆ ಸರ್ಕಾರ ಸಾರವರ್ಧಿತ ಅಕ್ಕಿಯನ್ನು ನೀಡುತ್ತಿದ್ದು, ಇದು ಪ್ಲಾಸ್ಟಿಕ್ ಅಕ್ಕಿ ಎಂಬುದಾಗಿ ಹರಡುವ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಆಹಾರ ಇಲಾಖೆ ಜಂಟಿನಿರ್ದೇಶಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜನಸಾಮಾನ್ಯರ ಅಪೌಷ್ಠಿಕತೆಯನ್ನು ಹೋಗಲಾಡಿಸಿ ಆರೋಗ್ಯವಂತ ಸಮಾಜ ನಿರ್ಮಿಸುವ ಗುರಿಯಿಟ್ಟುಕೊಂಡು ನ್ಯಾಯಬೆಲೆ ಅಂಗಡಿಗಳ ಮೂಲಕ ಶಾಲೆಗಳಲ್ಲಿ ಜಾರಿಯಲ್ಲಿರುವ ಮಧ್ಯಾಹ್ನದ ಉಪಹಾರ ಯೋಜನೆಯಲ್ಲಿ (ಅಕ್ಷರ ದಾಸೋಹ) ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ವಿತರಣೆ ಮಾಡುತ್ತಿರುವ ಅಕ್ಕಿಗೆ ಸಾರವರ್ಧಿತ ಅಕ್ಕಿಯನ್ನು ಸೇರಿಸಿ, ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ವಿತರಿಸಲಾಗುತ್ತಿದೆ.
ದಿನಿತ್ಯದ ಆಹಾರದಲ್ಲಿ ದೇಹಕ್ಕೆ ಬೇಕಾಗುವ ಸಂಪೂರ್ಣ ಪೋಷಕಾಂಶಗಳು ಲಭ್ಯವಾಗದೇ ಇರುವ ಕಾರಣದಿಂದ ಮಕ್ಕಳು, ಮಹಿಳೆಯರು, ವೃದ್ಧರು, ಗರ್ಭಿಣಿ ಸ್ತ್ರೀಯರಲ್ಲಿ ರಕ್ತ ಹೀನತೆ (ಅನಿಮಿಯ) ಮತ್ತು ಅಪೌಷ್ಟಿಕತೆ ಕಂಡುಬರುತ್ತಿದೆ. ಇದನ್ನು ಮನಗಂಡಿರುವ ಸರ್ಕಾರ ಜನಸಾಮಾನ್ಯರ ಅಪೌಷ್ಠಿಕತೆಯನ್ನು ಹೋಗಲಾಡಿಸಿ ಆರೋಗ್ಯವಂತ ಸಮಾಜ ನಿರ್ಮಿಸುವ ಗುರಿಯಿಟ್ಟುಕೊಂಡು, ಮಧ್ಯಾಹ್ನ ಉಪಹಾರ ಯೋಜನೆಯಲ್ಲಿ (ಅಕ್ಷರ ದಾಸೋಹ) ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ 2022ರ ಮೇ ಮಾಹೆಯಿಂದ ಸಾರವರ್ಧಿತ ಅಕ್ಕಿಯನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ.
ಸಾರವರ್ಧಿತ ಅಕ್ಕಿಯು ಫೋಲಿಕ್ ಆಸಿಡ್, ಕಬ್ಬಿಣಾಂಶ ಹಾಗೂ ವಿಟಮಿನ್-ಬಿ-12 ಗಳನ್ನು ಹೊಂದಿರುವ ಅಕ್ಕಿ ಹಿಟ್ಟಿನ ರೂಪದಲ್ಲಿರುವ ಈ ಪೋಷಕಾಂಶಗಳನ್ನು ಸಾಗಾಣಿಕೆಯ ಸಂದರ್ಭದಲ್ಲಿ ವ್ಯರ್ಥವಾಗಿ ಸೋರಿಕೆಯಾಗದಂತೆ ಫಲಾನುಭವಿಗಳಿಗೆ ತಲುಪಿಸಲು ಅಕ್ಕಿಯ ಅಚ್ಚಿಗೆ ಪರಿವರ್ತಿಸಲಾಗುತ್ತದೆ. ಹೀಗೆ ಅಕ್ಕಿಯ ರೂಪಕ್ಕೆ ಪಡಿಯಚ್ಚು ಹಾಕಲಾದ ಪೋಷಕಾಂಶ ಭರಿತ ಸಾರವರ್ಧಿತ/ಬಲವರ್ಧಿತ ಅಕ್ಕಿಯನ್ನು ಒಂದು ಕ್ವಿಂಟಾಲ್‍ಗೆ 01 ಕೆ.ಜಿ.ಯಷ್ಟು ಸೇರಿಸಿ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ವಿತರಿಸಲಾಗುತ್ತಿದೆ.
ಈ ಸಾರವರ್ಧಿತ ಅಕ್ಕಿಯು ಸಾಮಾನ್ಯ ಅಕ್ಕಿಗಿಂತ ವಿಭಿನ್ನ ಹೊಳಪು, ಗಾತ್ರ, ರುಚಿ ಹೊಂದಿದ್ದು, ಈ ಕಾರಣಕ್ಕೆ ಪ್ಲಾಸ್ಟಿಕ್ ಅಕ್ಕಿಯೆಂಬ ಸುಳ್ಳು ಸುದ್ದಿ ಆಗಾಗ ಹರಿದಾಡುವುದುಂಟು. ಫಲಾನುಭವಿಗಳು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದೇ ಜಾಗೃತರಾಗಬೇಕು. ಈ ಸಾರವರ್ಧಿತ ಅಕ್ಕಿ ಯಾವುದೇ ಪ್ಲಾಸ್ಟಿಕ್‍ನಿಂದ ಮಾಡಿರುವುದಿಲ್ಲ. ಬದಲಿಗೆ ಪೋಷಕಾಂಶಗಳ ಹಿಟ್ಟಿನಿಂದ ನಿರ್ಮಾಣವಾದ ಅಕ್ಕಿಯಾಗಿದೆ. ಪೋಷಕಾಂಶಗಳ ಹಿಟ್ಟಿನಿಂದ ತಯಾರಿಸಲಾದ್ದರಿಂದ ನೀರಿನಲ್ಲಿ ತೇಲುತ್ತದೆ. ಅನ್ನ ಬೇಯಿಸುವ ಮುಂಚೆ ತಾಯಂದಿರು ಅಕ್ಕಿ ತೊಳೆಯುವಾಗ ಈ ತೇಲುವ ಸಾರವರ್ಧಿತ ಅಕ್ಕಿಯನ್ನು ಜೋಳ್ಳು ಅಕ್ಕಿಯೆಂದು ಹೊರಗೆ ಎಸೆಯಲಾರದೇ ಅದೇ ಅಕ್ಕಿಯಲ್ಲಿ ಸೇರಿಸಿ ಸಾಮಾನ್ಯ ಅಕ್ಕಿಯ ಅನ್ನ ಮಾಡುವ ವಿಧಾನದ ಮೂಲಕವೇ ಬೇಯಿಸಿ ತಿನ್ನಬೇಕು. ಈ ಸಾರವರ್ಧಿತ ಅಕ್ಕಿಯ ಬಳಕೆಯಿಂದ ಬೆಳೆಯುತ್ತಿರುವ ಮಕ್ಕಳು, ವೃದ್ಧರು, ಗರ್ಭಿಣಿ ಸ್ತ್ರೀಯರು, ಮಹಿಳೆಯರ ಆರೋಗ್ಯ ವೃದ್ಧಿಸುತ್ತದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಯೋಜನೆಗಳು ಭಾರತ ಸರ್ಕಾರದ ಉಪಕ್ರಮವಾಗಿದ್ದು, ಸಾರವರ್ಧಿತ ಅಕ್ಕಿಯ ಪ್ರತಿಯೊಂದು ತುಣುಕು ಉತ್ತಮ ಆರೋಗ್ಯ, ಪೋಷಣೆ ಮತ್ತು ರುಚಿಯನ್ನು ಖಚಿತಪಡಿಸುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































