ಹವಾಮಾನ ಬದಲಾವಣೆಯಿಂದ ಉಂಟಾಗುವ ಪರಿಣಾಮಗಳನ್ನು ತಡೆಗಟ್ಟಲು ವಿಶ್ವಸಂಸ್ಥೆ ನೀಡಿರುವ ಗುರಿಗಳನ್ನು ಸಾಧಿಸುವ ದಿಕ್ಕಿನಲ್ಲಿ ಭಾರತ ಹಲವು ಕ್ರಮಗಳನ್ನು ಕೈಗೊಂಡಿದ್ದು, ಪಿಎಂ ಕುಸುಮ್ ಯೋಜನೆ ಅದರ ಪ್ರಮುಖ ಭಾಗವಾಗಿದೆ. ಇದು ಪರ್ಯಾಯ ಹಾಗೂ ಹಸಿರು ಇಂಧನವಾದ ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲು ರೂಪಿಸಲಾಗಿದೆ.
ಪಿಎಂ ಕುಸುಮ್ ಯೋಜನೆ ಎಂದರೆ:
ಪಿಎಂ ಕಿಸಾನ್ ಊರ್ಜಾ ಸುರಕ್ಷಾ ಮತ್ತು ಉತ್ಥಾನ ಮಹಾಭಿಯಾನ.ಈ ಯೋಜನೆ ಕೇಂದ್ರ ಸರ್ಕಾರದ ಹೊಸ ಮತ್ತು ಮರುಬಳಕೆ ಇಂಧನ ಸಚಿವಾಲಯದ ಅಧೀನದಲ್ಲಿದೆ. ರೈತರು ತಮ್ಮ ಬಂಜರು ಅಥವಾ ಕೃಷಿಯೋಗ್ಯ ಭೂಮಿಯಲ್ಲಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ, ಸ್ವಂತ ಬಳಕೆಯ ನಂತರ ಉಳಿದ ವಿದ್ಯುತ್ ಅನ್ನು ಗ್ರೀಡ್‌ಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸಬಹುದು. ಡಿಸ್ಕಾಮ್‌ಗಳು ಅಥವಾ ವಿದ್ಯುತ್ ಪ್ರಸರಣ ಸಂಸ್ಥೆಗಳು ಈ ವಿದ್ಯುತ್ ಖರೀದಿಸುತ್ತವೆ.
ಯೋಜನೆಯ ಉದ್ದೇಶ:
ರೈತರಿಗೆ ಇಂಧನ ಮತ್ತು ನೀರಿನ ಭದ್ರತೆ ಒದಗಿಸಿ, ಅವರ ಆದಾಯವನ್ನು ಹೆಚ್ಚಿಸುವುದಾಗಿದೆ. ಜೊತೆಗೆ ಕೃಷಿ ಕ್ಷೇತ್ರದಲ್ಲಿ ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯನ್ನು 2019ರ ಮಾರ್ಚ್ 8 ರಂದು ಆರಂಭಿಸಲಾಯಿತು. 2020-21ರ ಅವಧಿಯಲ್ಲಿ ಯೋಜನೆ ವಿಸ್ತರಣೆಗೊಂಡು, ಆಗಸ್ಟ್ 2022ರಲ್ಲಿ ಮಾರ್ಚ್ 2026ರ ವರೆಗೆ ಕಾಲಾವಧಿ ಹೆಚ್ಚಿಸಲಾಯಿತು. ಈ ಅವಧಿಯಲ್ಲಿ 34,800 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿಯಾಗಿದ್ದು, ಕೇಂದ್ರದಿಂದ 34,422 ಕೋಟಿ ರೂ. ಹಣಕಾಸು ಸಹಾಯವನ್ನು ಪಡೆದುಕೊಳ್ಳಲಿದೆ.
ಪ್ರಮುಖ ಪ್ರಯೋಜನಗಳು:
- ರೈತರು ತಮ್ಮ ಒಣಭೂಮಿಯನ್ನು ಉಪಯೋಗಿಸಿ 25 ವರ್ಷಗಳ ಕಾಲ ಸ್ಥಿರ ಆದಾಯ ಪಡೆಯಬಹುದು.
- ಸೌರ ಫಲಕಗಳನ್ನು ಎತ್ತರದಲ್ಲಿ ಅಳವಡಿಸಿ ಬೆಳೆಗಳ ಬೆಳೆಸುವ ವ್ಯವಸ್ಥೆ ಕೂಡ ಮಾಡಬಹುದು.
- ಸ್ಥಳೀಯವಾಗಿ ವಿದ್ಯುತ್ ಲಭ್ಯವಾಗುವುದರಿಂದ ಗ್ರಾಮೀಣ ಪ್ರದೇಶದ ಲೋಡ್ ಸೆಂಟರ್‌ಗಳಿಗೆ ಮತ್ತು ಕೃಷಿ ಪಂಪ್‌ಗಳಿಗೆ ಹಗಲು ಅವಧಿಯಲ್ಲಿ ನೇರ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ.
- ವಿದ್ಯುತ್ ಪ್ರಸರಣದ ದೂರ ಕಡಿಮೆ ಆಗುವುದರಿಂದ ಡಿಸ್ಕಾಮ್‌ಗಳಿಗೆ ನಷ್ಟವೂ ಕಡಿಮೆಯಾಗುತ್ತದೆ.
- ಡಿಸ್ಕಾಮ್‌ಗಳು RPO ಗುರಿಗಳನ್ನು ಸಾಧಿಸಲು ಸಹಾಯವಾಗುತ್ತದೆ.
ಡೀಸೆಲ್ ಸೇವನೆ ಕಡಿತ:
ಸೋಲಾರ್ ಪಂಪ್‌ಗಳು ಡೀಸೆಲ್ ಪಂಪ್‌ಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಡೀಸೆಲ್ ಖರ್ಚು ಉಳಿಯುವುದು ಮಾತ್ರವಲ್ಲದೆ, ಪರಿಸರ ಮಾಲಿನ್ಯವೂ ಕಡಿಮೆಯಾಗುತ್ತದೆ. ಅಲ್ಲದೆ, ವಿದ್ಯುತ್ ಗ್ರಿಡ್ ಸಂಪರ್ಕಕ್ಕೆ ಕಾಯುವ ಅವಶ್ಯಕತೆ ಇಲ್ಲದೇ ಇದ್ದರೂ, ಈ ಯೋಜನೆಯು ನಾಲ್ಕು ವರ್ಷಗಳಲ್ಲಿ ಸುಮಾರು 17.5 ಲಕ್ಷ ರೈತರಿಗೆ ಲಾಭ ನೀಡಲು ಉದ್ದೇಶಿಸಿದೆ.