ತಿರುವನಂತಪುರಂ: ಕೇರಳಕ್ಕೆ ನಿಗದಿಪಡಿಸಲಾದ ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಸಿರು ನಿಶಾನೆ ತೋರಿದರು. ತಿರುವನಂತಪುರಂ-ತಾಂಬರಂ, ನಾಗರ್‌ಕೋಯಿಲ್-ಮಂಗಳೂರು ಜಂಕ್ಷನ್ ಹಾಗೂ ತಿರುವನಂತಪುರಂ-ಚಾರ್ಲಪಳ್ಳಿ ಮಾರ್ಗಗಳ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಅಧಿಕೃತವಾಗಿ ಚಾಲನೆ ಪಡೆದವು. ಇದರೊಂದಿಗೆ ಗುರುವಾಯೂರ್-ತ್ರಿಶೂರ್ ಪ್ಯಾಸೆಂಜರ್ ರೈಲಿಗೂ ಪ್ರಧಾನಿ ಹಸಿರು ನಿಶಾನೆ ತೋರಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಕೇಂದ್ರ ಸಚಿವರಾದ ವಿ. ಸೋಮಣ್ಣ, ಜಾರ್ಜ್ ಕುರಿಯನ್, ಸಚಿವ ಎಂ.ಬಿ. ರಾಜೇಶ್, ತಿರುವನಂತಪುರಂ ಮೇಯರ್ ವಿ.ವಿ. ರಾಜೇಶ್, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ದೀರ್ಘ ದೂರದ ಪ್ರಯಾಣವನ್ನು ಸಾಮಾನ್ಯ ಜನರಿಗೆ ಕೈಗೆಟುಕುವಂತೆ ಮಾಡಲು ರೈಲ್ವೆ ಇಲಾಖೆ ಪರಿಚಯಿಸಿದೆ. ಈ ರೈಲುಗಳು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಸಂಚರಿಸಬಹುದಾಗಿದೆ. ಉತ್ತಮ ಮೆತ್ತನೆಯ ಆಸನಗಳು, ಪುಶ್-ಪುಲ್ ತಂತ್ರಜ್ಞಾನ, ಮೀಸಲಾದ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಆಧುನಿಕ ಲಗೇಜ್ ರ್ಯಾಕ್‌ಗಳು, ಸಂವೇದಕ ಆಧಾರಿತ ಟ್ಯಾಪ್‌ಗಳು, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಬಯೋ-ಟಾಯ್ಲೆಟ್‌ಗಳು ಈ ರೈಲುಗಳ ವೈಶಿಷ್ಟ್ಯವಾಗಿವೆ. ಪ್ರತಿಯೊಂದು ರೈಲಿನಲ್ಲಿ ಒಟ್ಟು 22 ಬೋಗಿಗಳು ಇರಲಿವೆ.
ಪ್ರಧಾನಿ ಮೋದಿ ಅವರು ಬೆಳಿಗ್ಗೆ ಸುಮಾರು 10.40ರ ವೇಳೆಗೆ ತಿರುವನಂತಪುರಂಗೆ ಆಗಮಿಸಿದರು. ವಿಮಾನ ನಿಲ್ದಾಣದಿಂದ ವಾಹನ ಮೆರವಣಿಗೆಯೊಂದಿಗೆ ಮೇಲ್ಸೇತುವೆ ಮೂಲಕ ಪುಥರಿಕಂಡಂವರೆಗೆ ರೋಡ್ ಶೋ ನಡೆಸಿದರು. ಬಳಿಕ ರೈಲ್ವೆ ಯೋಜನೆಗಳ ಉದ್ಘಾಟನೆ ಹಾಗೂ ಘೋಷಣೆಗಳು ನಡೆದವು. ಈ ಸಂದರ್ಭ ಅವರು CSIR–NIIST ನಾವೀನ್ಯತೆ, ತಂತ್ರಜ್ಞಾನ ಮತ್ತು ಉದ್ಯಮಶೀಲತಾ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಪುಥರಿಕಂಡಂ ಮೈದಾನದಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಪ್ರಧಾನಿ ಸುಮಾರು 250 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯಡಿ ಒಂದು ಲಕ್ಷ ಫಲಾನುಭವಿಗಳಿಗೆ ಸಾಲ ಮತ್ತು ಕ್ರೆಡಿಟ್ ಕಾರ್ಡ್‌ಗಳ ವಿತರಣೆಯನ್ನು ಅವರು ಉದ್ಘಾಟಿಸಿದರು. ಇದಲ್ಲದೆ, ತಿರುವನಂತಪುರಂನ ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಅತ್ಯಾಧುನಿಕ ರೇಡಿಯೋ ಸರ್ಜರಿ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಪೂಜಾಪುರದ ಮುಖ್ಯ ಅಂಚೆ ಕಚೇರಿಯನ್ನೂ ಪ್ರಧಾನಿ ಉದ್ಘಾಟಿಸಿದರು.
ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ನಂತರ ಪ್ರಧಾನಿ ಪುತ್ತರಿಕಂಡಂನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಮಾರು ಕಾಲು ಲಕ್ಷ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ನಡುವೆ, ತಿರುವನಂತಪುರಂ ಕಾರ್ಪೊರೇಷನ್‌ನ ಅಭಿವೃದ್ಧಿ ದಾಖಲೆಯ ಘೋಷಣೆ ಇಂದು ನಡೆಯಲಿಲ್ಲ. ರಾಜ್ಯ ಸರ್ಕಾರದೊಂದಿಗೆ ವಿವರವಾದ ಚರ್ಚೆಯ ನಂತರವೇ ಘೋಷಣೆ ಮಾಡಲಾಗುವುದು ಎಂದು ಮೇಯರ್ ವಿ.ವಿ. ರಾಜೇಶ್ ತಿಳಿಸಿದರು. ಪ್ರಧಾನಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮೇಯರ್ ಸ್ವಾಗತಕ್ಕೆ ಹಾಜರಾಗಿರಲಿಲ್ಲ. ಭದ್ರತಾ ಕಾರಣಗಳು ಹಾಗೂ ಪ್ರಧಾನಿ ಭಾಗವಹಿಸಿದ್ದ ಎರಡು ಕಾರ್ಯಕ್ರಮಗಳ ಪೂರ್ವಸಿದ್ಧತೆಯ ಹಿನ್ನೆಲೆಯಲ್ಲಿ ಅವರು ಸ್ಥಳದಲ್ಲೇ ಇರಬೇಕಾಗಿದ್ದುದರಿಂದ ಸ್ವಾಗತಕ್ಕೆ ಆಗಮಿಸಲಾಗಲಿಲ್ಲ ಎಂದು ವಿವರಣೆ ನೀಡಲಾಗಿದೆ.

































