ಚಿತ್ರದುರ್ಗ: ಕವಿಗಳು ಬರವಣಿಗೆಯಲ್ಲಿ ಸಣ್ಣ ಸಣ್ಣ ವಿಚಾರಗಳನ್ನು ಹೇಳುತ್ತಾ, ದೊಡ್ಡ ಮಟ್ಟದ ಚಿಂತನ ಲಹರಿಗಳನ್ನ ಜನರಲ್ಲಿ ಬೆಳೆಸುವ ಸತ್ವವನ್ನು ರೂಡಿಸಿಕೊಳ್ಳಬೇಕು, ಜನರಲ್ಲಿ ವೈಜ್ಞಾನಿಕ ಚಿಂತನೆಗಳನ್ನ, ಪ್ರಶ್ನೆ ಮಾಡುವ ಕೌಶಲ್ಯಗಳನ್ನ, ಬದುಕು ಕಟ್ಟಿಕೊಳ್ಳುವ, ಅಲ್ಪ ಮಾನವನಿಂದ ವಿಶ್ವಮಾನವನಾಗುವ ನಿಟ್ಟಿನಲ್ಲಿ ಬರವಣಿಗೆಗಳು ಸೃಷ್ಟಿಯಾಗಬೇಕು ಎಂದು ಕನ್ನಡ ಉಪನ್ಯಾಸಕರಾದ ಡಾ ಎಂ. ವೇದಾಂತ್ ಏಳಂಜಿ ಹೇಳಿದರು.
ಅವರು ಚಿತ್ರದುರ್ಗ ನಗರದ ಎಸ್ ಜೆ ಎಂ ಐ ಟಿ ಸರ್ಕಲ್ ಬಳಿ ಇರುವ ಲಿಟಲ್ ಹೆವೆನ್ ಕ್ರಿಯೇಶನ್ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ತಿಪ್ಪೇಸ್ವಾಮಿ ಬಿ.ಜಿ ರವರ ಚೊಚ್ಚಲ ಕವನ ಸಂಕಲನ ಪತಂಗ ಆಶು ಕವನಗಳ ಸಂಗ್ರಹದ ಮೊದಲ ಕವನ ಸಂಕಲನ ಲೋಕಾರ್ಪಣೆ ಸಮಾರಂಭ ಮತ್ತು ವಿಜ್ಞಾನ ಪ್ರಶ್ನೋತ್ತರ ಸಿರಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಬಹುತೇಕ ವಿಜ್ಞಾನ ಶಿಕ್ಷಕರು ವಿಜ್ಞಾನವನ್ನು ಪ್ರಾಯೋಗಿಕವಾಗಿ ಬೋಧನೆ ಮಾಡದೆ ಸಿದ್ಧಾಂತಗಳನ್ನ ಬೋಧಿಸುತ್ತಾರೆ, ಸರ್ಕಾರಿ ಶಾಲೆಗಳಲ್ಲಿ ಬಹಳಷ್ಟು ಬಡವರು ಮತ್ತು ಹಿಂದುಳಿದ ಮಕ್ಕಳೇ ಕಲಿಯುತ್ತಿದ್ದಾರೆ, ಅಂತಹ ಮಕ್ಕಳ ಬಗ್ಗೆ ಚಿಂತಿಸಿ ಕೆಲಸ ಮಾಡುತ್ತಿರುವಂತಹ ತಿಪ್ಪೇಸ್ವಾಮಿ ಬಿ.ಜಿ ರವರಂತ ಶಿಕ್ಷಕರ ಸಂಖ್ಯೆ ಹೆಚ್ಚಾಗಬೇಕು ಎಂದರು.
ವಿಜ್ಞಾನ ಶಿಕ್ಷಕರಾಗಿದ್ದರು ಸಹ ಕವಿತೆ ಬರೆಯುವಾಗ ಸಣ್ಣ ವಿಷಯಗಳನ್ನು ಸಹ ಗಮನಕ್ಕೆ ತೆಗೆದುಕೊಂಡು, ಓದುಗನ್ನು ಚಿಂತಿಸುವಂತೆ ಮತ್ತು ವಾಸ್ತವ ಸಮಾಜಕ್ಕೆ ಮುಖಾಮುಖಿಯಾಗಿ, ಸಾಮಾಜಿಕ ಹೊಣೆಗಾರಿಕೆಯಿಂದ ತಮ್ಮ ಅನಿಸಿಕೆಗಳನ್ನು ಅಕ್ಷರಗಳಲ್ಲಿ ಹಿಡಿದಿಟ್ಟುಕೊಂಡಿದ್ದಾರೆ, ದಿನನಿತ್ಯದ ಒಡನಾಟದಲ್ಲಿನ ಜಗತ್ತನ್ನು ಅಕ್ಷರಗಳಲ್ಲಿ ಮಾಲೆಯಂತೆ ಪೋಣಿಸಿದ್ದಾರೆ ಎಂದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷರು ಮತ್ತು ಕರ್ನಾಟಕ ಸರ್ವೋದಯ ಮಂಡಳಿ ಜಿಲ್ಲಾಧ್ಯಕ್ಷರಾದ ಡಾ.ಎಚ್ ಕೆ ಎಸ್ ಸ್ವಾಮಿ ಅವರು ಮಾತನಾಡುತ್ತಾ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದಷ್ಟು ಜನರಲ್ಲಿ ಜಾಗೃತಿ ಮೂಡುತ್ತದೆ, ವಿಜ್ಞಾನವನ್ನ ಮಾತೃಭಾಷೆಯಲ್ಲಿ ಬೋಧಿಸಿ, ಜನಸಾಮಾನ್ಯರಲ್ಲಿ ಪರಿಸರ ಚಿಂತನೆಗಳನ್ನ ಮೂಡಿಸಬೇಕಾಗಿದೆ. ಗಾಂಧೀಜಿಯವರು ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಚರಕವನ್ನು ಪರಿಚಯಿಸಿ, ಖಾದಿಯನ್ನ ಪ್ರೋತ್ಸಾಹಿಸಿದ್ದರು. ಕವಿಗಳು ಸಹ ಚರಕದ ಮೇಲೆ ಕವಿತೆಗಳನ್ನ ಬರೆದು ಖಾದಿಯನ್ನ ಪ್ರಚಾರಪಡಿಸಬೇಕು ಎಂದರು.
ಶರಣ ಸಾಹಿತಿಗಳು, ಅಧ್ಯಕ್ಷರು, ಚೆನ್ನಬಸವೇಶ್ವರ ಪ್ರತಿಷ್ಠಾನ, ಬಸವನ ಬಾಗೇವಾಡಿ, ವಿಜಾಪುರ ಜಿಲ್ಲೆಯ ಶ್ರೀ ವಿವೇಕಾನಂದ ಕಲ್ಯಾಣ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷೀಯ ಭಾಷಣ ಮಾಡುತ್ತಾ ಕವನಗಳು ಅರ್ಥಪೂರ್ಣವಾಗಿದ್ದು ಕನ್ನಡದ ಬೆಳವಣಿಗೆಗೆ ಸಹಕಾರಿಯಾಗಿದೆ ಇಂತಹ ಇನ್ನೊಂದಿಷ್ಟು ಪುಸ್ತಕಗಳು ಬಿಡುಗಡೆಯಾಗಲಿ ಎಂದು ಹಾರೈಸಿದರು.
ಲೇಖಕರಾದ ಶ್ರೀ ತಿಪ್ಪೇಸ್ವಾಮಿ ಬಿ.ಜಿ. ಮಾತನಾಡುತ್ತಾ ನನ್ನ ಪ್ರಾಥಮಿಕ ಶಾಲಾ ಶಿಕ್ಷಣ ಕೊಂಡ್ಲಹಳ್ಳಿ ಮೊಳಕಾಲ್ಮೂರು ತಾಲೂಕಿನಲ್ಲಿ ಪ್ರಾರಂಭವಾಗಿ, ನನ್ನ ಪೋಷಕರ ಪ್ರೋತ್ಸಾಹ ಮತ್ತು ಸಹಕಾರದಿಂದ ನನ್ನ ಕವನಗಳ ರಚನೆಗೆ ಸ್ಪೂರ್ತಿದಾಯಕವಾಗಿದ್ದು, ನಾನು ನನ್ನ ಮೊದಲ ಕವನ ಸಂಕಲನವನ್ನು ನನ್ನ ಜನ್ಮದಾತರಿಗೆ ಅರ್ಪಣೆ ಮಾಡಿದ್ದೇನೆ, ನನ್ನನ್ನು ಪ್ರೋತ್ಸಾಹಿಸಿದ, ಸ್ನೇಹಿತರು, ಶಿಕ್ಷಕರು, ವಿದ್ಯಾರ್ಥಿಗಳು, ನನ್ನನ್ನು ಪ್ರಪಂಚದಲ್ಲಿ ಪುಟಾಣಿ ಹೆಜ್ಜೆ ಇಟ್ಟು ಮೇಲೆ ಬರಲು ಸಹಾಯಕವಾಗಿದೆ ಹಾಗೂ ನನ್ನ ಕವನಗಳ ರಚನೆಗೆ ಸ್ಪೂರ್ತಿದಾಯಕವಾಗಿದೆ ಎಂದರು.

































