ಕಾಶ್ಮೀರ: ಪ್ರಯಾಣಿಕರ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಘಟನೆ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶದಲ್ಲಿ ಶನಿವಾರ ಸಂಜೆ 6.30 ರ ಸುಮಾರಿಗೆ ನಡೆದಿದೆ. ದಾಳಿಯಲ್ಲಿ ಕನಿಷ್ಠ 8 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ಸುಮರು 26 ಮಂದಿಗೆ ಗಾಯಗಳಾಗಿವೆ.
ಈ ಕುರಿತು ಮಾಹಿತಿ ನೀಡಿದ ಅಧಿಕಾರಿಯೊಬ್ಬರು ಬಸ್ ಗಿಲ್ಗಿಟ್ನಿಂದ ರಾವಲ್ಪಿಂಡಿಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಭಯೋತ್ಪಾದಕರು ಚಿಲಾಸ್ ಬಳಿ ಬಸ್ ತಡೆದು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಿಂದ ಬಸ್ಸು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ಸು ಎದುರಿನಿಂದ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಇನ್ನು ದಾಳಿಯಲ್ಲಿ ಮೃತಪಟ್ಟ 8 ಮಂದಿಯ ಪೈಕಿ 5 ಮಂದಿಯನ್ನು ಗುರುತಿಸಲಾಗಿದೆ. ಹಾಗೂ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸೇನಾ ಯೋಧರೂ ಮೃತಪಟ್ಟಿದ್ದು, ವಿಶೇಷ ರಕ್ಷಣಾ ಘಟಕದ ಓರ್ವ ಸಿಬ್ಬಂದಿ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹೆಚ್ಚಿನ ಜನರು ಹೆಚ್ಚಿನ ಜನರು ಕೊಹಿಸ್ತಾನ್, ಪೇಶಾವರ್, ಘಿಜರ್, ಚಿಲಾಸ್, ರೌಂಡು, ಸ್ಕರ್ಡು, ಮನ್ಸೆಹ್ರಾ ಮತ್ತು ಸ್ವಾಬಿ ಪ್ರದೇಶಗಳಿಗೆ ಸೇರಿದವರು ಹಾಗೂ ಒಬ್ಬರು ಅಥವಾ ಇಬ್ಬರು ಸಿಂಧ್ ಪ್ರದೇಶಕ್ಕೆ ಸೇರಿದವರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಬಹುದು ಎನ್ನಲಾಗಿದೆ. ಇನ್ನು ದಾಳಿಯ ಕುರಿತಂತೆ ಈಗಾಗಲೇ ತನಿಖೆ ಪ್ರಾರಂಭವಾಗಿದ್ದು, ಭಯೋತ್ಪಾದಕರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.