ಮುಂಬೈ : ನಾಗ್ಪುರ ಹಿಂಸಾಚಾರ ಘಟನೆ ದುರದೃಷ್ಟಕರವಾಗಿದ್ದು, ಜನರು ಶಾಂತಿ ಕಾಪಾಡಬೇಕು. ಜೊತೆಗೆ ಇದೊಂದು ಪೂರ್ವಯೋಜಿತ ಪಿತೂರಿಯೇ ಎಂಬ ಕುರಿತು ಪೊಲೀಸರು ತನಿಖೆಗೆ ನಡೆಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಪಿ ಮಟ್ಟದ ನಾಲ್ವರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಸಿಎಂ ಘಟನೆಯ ಪರಿಶೀಲನೆ ನಡೆಸಿದ್ದಾರೆ. ಹೊರಗಿನ ಅನೇಕರು ಬಂದಿರುವುದು ಗಮನಕ್ಕೆ ಬಂದಿದೆ. ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದರು.
ಉದ್ರಿಕ್ತರ ಗುಂಪು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಿ, ಅಪಾರ ಆಸ್ತಿಪಾಸ್ತಿಗೆ ಹಾನಿ ಮಾಡಿದೆ. ಪೊಲೀಸರ ಮೇಲೆ ಕಲ್ಲೆಸೆಯಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೇಲೂ ದಾಳಿ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾಗ್ಪುರ ಶಾಂತಿಪ್ರಿಯ ನಗರ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಈ ಘಟನೆಯನ್ನು ಸೃಷ್ಟಿಸಲಾಗಿದೆ ಎಂದು ಹೇಳಿದರು.