ನವದೆಹಲಿ: ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅಂತ್ಯಸಂಸ್ಕಾರ ಹಾಗೂ ಮೆಮೋರಿಯಲ್ ಕುರಿತು ಕಾಂಗ್ರೆಸ್ ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗುತ್ತಿದೆ.
ಇದರ ನಡುವೆ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ನಾಯಕ ದಿವಂಗತ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಠ ಮುಖರ್ಜಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನ್ಯೂಸ್ 18 ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶರ್ಮಿಷ್ಠ ಮುಖರ್ಜಿ ಅವರು, ‘2013ರಲ್ಲಿ ಪ್ರಧಾನಿ ಮನ್‌ಮೋಹನ್ ಸಿಂಗ್ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ಬಹಿರಂಗವಾಗಿ ಹರಿದು ಹಾಕಿದ್ದರು. ಇದು ಪ್ರಧಾನಿಗೆ ಮಾಡಿದ ಅಪಮಾನವಾಗಿದೆ. ಅಹಂಕಾರ ಹಾಗೂ ದರ್ಪದ ನಡೆಯಾಗಿದೆ.
ಅಂದು ಪ್ರಧಾನಿ ಸಿಂಗ್ ವಿದೇಶ ಪ್ರವಾಸದಲ್ಲಿದ್ದರು. ಇತ್ತ ರಾಹುಲ್ ಗಾಂಧಿಗೆ ಪಕ್ಷದಿಂದ ಯಾವ ಶಿಕ್ಷೆಯೂ ಅಗಲಿಲ್ಲ. ಬೇರೆ ಯಾರೇ ಆಗಿದ್ದರೂ ಪಕ್ಷದಿಂದ ವಜಾಗೊಳ್ಳುತ್ತಿದ್ದರು. ಇಲ್ಲಿ ಹಾಗೇ ಆಗಲಿಲ್ಲ ಕಾರಣ ರಾಜೀವ್ ಗಾಂಧಿ’ ಎಂದು ಹೇಳಿದ್ದಾರೆ. ಮೆಮೋರಿಯಲ್ ಕುರಿತು ಕಾಂಗ್ರೆಸ್ ಮಾಡಿದ ಆಗ್ರಹವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಇದೀಗ ಇದೇ ವಿಚಾರ ಹಿಡಿದು ವಿವಾದ ಎಬ್ಬಿಸುವ ಅನಿವಾರ್ಯತೆ ಏನಿತ್ತು.
ಬಿಜೆಪಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಉತ್ತಮ ನಾಯಕತ್ವದಲ್ಲಿ ಮುನ್ನಡೆಯುತ್ತಿದೆ. ಆದರೆ ಕಾಂಗ್ರೆಸ್ ಯಾಕೆ ರೀತಿ ಮಾಡುತ್ತಿದೆ ಅನ್ನೋದು ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಕಾಂಗ್ರೆಸ್ ನಾಯಕರನ್ನು ಬಿಜೆಪಿ ಉತ್ತಮವಾಗಿ ಗೌರವಿಸಿದೆ. ಗುಲಾಮ್ ನಬಿ ಆಜಾದ್, ತರುಣ್ ಗೋಗೋಯ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಆದರೆ ನಡೆಯನ್ನು ಕಾಂಗ್ರೆಸ್ ಅನುಸರಿಸಿದೆಯಾ? ಎಂದು ಶರ್ಮಿಷ್ಠಾ ಮುಖರ್ಜಿ ಪ್ರಶ್ನಿಸಿದ್ದಾರೆ.
ಪಿವಿ ನರಸಿಂಹ ರಾವ್ ಇದೀಗ ಮನ್‌ಮೋಹನ್ ಸಿಂಗ್ ಎಲ್ಲರ ವಿಚಾರದಲ್ಲೂ ಕಾಂಗ್ರೆಸ್ ಅತ್ಯಂತ ಕೆಟ್ಟ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಇದಕ್ಕೆ ನನ್ನ ತಂದೆ ನಿಧನದ ಬಳಿಕ ಕಾಂಗ್ರೆಸ್ ನಡೆದುಕೊಂಡ ರೀತಿಯೇ ಸಾಕ್ಷಿ ಎಂದು ಶರ್ಮಿಷ್ಠಾ ಮುಖರ್ಜಿ ಆರೋಪಿಸಿದ್ದಾರೆ.