ಬೆಂಗಳೂರು: ಕರ್ನಾಟಕದಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಸಜ್ಜಾಗಿರುವ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಮಿನಿ ಏರ್‌ಪೋರ್ಟ್’ ನಿರ್ಮಿಸುವ ಯೋಜನೆಗೆ ಕೈ ಹಾಕಿದೆ. ಆರಂಭಿಕ ಹಂತದಲ್ಲಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಜಾಗ ಅಂತಿಮ ಮಾಡಿರುವ ಸರ್ಕಾರ ಡಿಪಿಆರ್ ಸಿದ್ಧಪಡಿಸುವಲ್ಲಿ ನಿರತವಾಗಿದೆ. ಭವಿಷ್ಯದಲ್ಲಿ ಇದರಿಂದ ಪ್ರವಾಸೋದ್ಯಮಕ್ಕೆ ಭಾರೀ ಉತ್ತೇಜನ ಸಿಗುವ ವಿಶ್ವಾಸ ಇದೆ.
ಪ್ರವಾಸೋದ್ಯಮ ಬೆಂಬಲಿಸುವುದು ಮಾತ್ರವಲ್ಲದೇ ಕೈಗಾರಿಕೆ ಅಭಿವೃದ್ಧಿ, ನೈಸರ್ಗಿಕ ವಿಕೋಪಗಳು ಎದುರಾದ ಸಂದರ್ಭದಲ್ಲಿ ತ್ವರಿತಗತಿಯಲ್ಲಿ ಪ್ರತಿಕ್ರಿಯಿಸುವ ಸಂಬಂಧ ಮಿನಿ ಏರ್‌ಪೋರ್ಟ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಯಾವೆಲ್ಲ ಜಿಲ್ಲೆಗಳಲ್ಲಿ ಪ್ರಸ್ತುತದಲ್ಲಿ ವಿಮಾನ ನಿಲ್ದಾಣಗಳನ್ನು ಹೊಂದಿಲ್ಲವೇ ಅಂತಹ ಜಿಲ್ಲೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ‘ಏರ್‌ಸ್ಟ್ರಿಪ್’ ನಿರ್ಮಿಸಲು ಮುಂದಾಗಿದೆ.
ಈಗಾಗಲೇ ಮೂರು ಜಿಲ್ಲೆಗಳಲ್ಲಿ ಈ ಮಿನಿ ಏರ್‌ಪೋರ್ಟ್ ಅಥವಾ ಏರ್‌ಸ್ಟ್ರಿಪ್ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ. ಎರಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗಿನಲ್ಲಿ ಸರ್ಕಾರ ಜಾಗವನ್ನು ಹುಡುಕಿ ಇಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಜಾಗ ಗುರುತಿಸುವುದು ಬಾಕಿ ಇದೆ. ಶೀಗ್ರವೇ ಇಲ್ಲಿ ಜಾಗ ಅಂತಿಮಗೊಳ್ಳುವ ನಿರೀಕ್ಷೆ ಇದೆ.
ಈಗಾಗಲೇ ಮೂರು ಜಿಲ್ಲೆಗಳಲ್ಲಿ ಈ ಮಿನಿ ಏರ್‌ಪೋರ್ಟ್ ಅಥವಾ ಏರ್‌ಸ್ಟ್ರಿಪ್ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ. ಎರಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗಿನಲ್ಲಿ ಸರ್ಕಾರ ಜಾಗವನ್ನು ಹುಡುಕಿ ಇಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಜಾಗ ಗುರುತಿಸುವುದು ಬಾಕಿ ಇದೆ. ಶೀಗ್ರವೇ ಇಲ್ಲಿ ಜಾಗ ಅಂತಿಮಗೊಳ್ಳುವ ನಿರೀಕ್ಷೆ ಇದೆ.
ಏರ್‌ಸ್ಟ್ರಿಪ್: ಸಾರ್ವಜನಿಕ ಹಾರಾಟಕ್ಕೆ ಅವಕಾಶ ಇದೆಯೆ?
ಈ ಮೂರು ಕಡೆಗಳಲ್ಲಿ ನಿರ್ಮಾಣವಾಗುತ್ತಿದ್ದಂತೆ ರಾಜ್ಯದಲ್ಲಿ ಏರ್‌ಪೋರ್ಟ್ ಇಲ್ಲದ ಇತರ ಜಿಲ್ಲೆಗಳಲ್ಲಿ ‘ಏರ್‌ಸ್ಟ್ರಿಪ್’ ಅಭಿವೃದ್ಧಿಪಡಿಸಲು ಇಲಾಖೆ ನಿರ್ಧರಿಸಿದೆ. ಈ ‘ಏರ್‌ಸ್ಟ್ರಿಪ್’ ಅನ್ನು ಸಾರ್ವಜನಿಕ ವಾಯು ಹಾರಾಟ ಸೇವೆ ಬಳಕೆ ಮಾಡದೇ, ಖಾಸಗಿ ಹಾಗೂ ಸರ್ಕಾರಿ ಕಾರ್ಯ ಚಟುವಟಿಕೆಗಳಿಗೆ ವಿಮಾನಗಳ ಹಾರಾಟ, ಇಳಿಸುವಿಕೆಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ಕರ್ನಾಟಕ ಬಜೆಟ್‌ನಲ್ಲಿ ಘೋಷಣೆ
ಏರ್‌ಸ್ಟ್ರಿಪ್ ಅಭಿವೃದ್ಧಿ ಯೋಜನೆಯನ್ನು ಕಳೆದ 2023-2024ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು. ಇದೀಗ ಘೊಷಣೆಯಂತೆ ಕಾರ್ಯೋನ್ಮುಖವಾದ ಸರ್ಕಾರ, ಅಗತ್ಯ ಸಿದ್ಧತೆ ಆರಂಭಿಸಿದೆ.
ಮಳೆ ಹಾನಿ, ಪ್ರವಾಹ ಇನ್ನಿತರ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಸರ್ಕಾರ, ವಿಪತ್ತು ನಿರ್ವಹಣೆ, ರಕ್ಷಣಾ ತಂಡ ಇನ್ನಿತರ ತ್ವರಿತ ಪ್ರತಿಕ್ರಿಯೆಗೆ ಈ ಮಿನಿ ಏರ್‌ಪೋರ್ಟ್ ಸಹಾಯಕವಾಗಲಿದೆ. ತುರ್ತು ವೇಳೆ ರಸ್ತೆ ಸಾರಿಗೆಗಿಂತಲೂ ಈ ವಾಯು ಸಾರಿಗೆ ಮೂಲಕ ಆಯಾ ಜಿಲ್ಲೆ ತಲುಪಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಎಲ್ಲ ಜಿಲ್ಲೆಗಳಲ್ಲಿ ಏರ್‌ಸ್ಟ್ರಿಪ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.