ಬೆಂಗಳೂರು: ಮಹಾ ಕುಂಭ ಮೇಳದಲ್ಲಿ ಹಿಂದೂ ರಾಷ್ಟ್ರ ಸಂವಿಧಾನ ಮಂಡನೆಗೆ ಸಜ್ಜಾಗಿರುವ ಸುದ್ದಿ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. “ಹಿಂದೂ ರಾಷ್ಟ್ರ”ಕ್ಕೆ”ಸಂವಿಧಾನ” ಸಿದ್ಧಪಡಿಸಿರುವ ಆಘಾತಕಾರಿ ಹಾಗೂ ಅತ್ಯಂತ ಅಪಾಯಕಾರಿ ಬೆಳವಣಿಗೆ ನಡೆದಿರುವುದು ದೇಶ ಭಾರಿ ಗಂಡಾಂತರ ಎದುರಿಸುವ ಮುನ್ಸೂಚನೆಯಂತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. ಜಾತ್ಯಾತೀತ ರಾಷ್ಟ್ರವೆಂದು ಒಪ್ಪಿಕೊಂಡ ದೇಶದ ಸಂವಿಧಾನದಲ್ಲಿ, ಹಿಂದೂ ರಾಷ್ಟ್ರ ಎಂದು ಘೋಷಿಸುವುದು, ಪ್ರತ್ಯೇಕ ಸಂವಿಧಾನ ರಚಿಸುವುದು ದೇಶದ್ರೋಹದ ಕೃತ್ಯ. ಸಂವಿಧಾನ ಬದಲಾಯಿಸುತ್ತೇವೆ, “ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು”, “ನಮಗೆ ಗೌರವ ಕೊಡುವ ಸಂವಿಧಾನ ರಚಿಸಿಕೊಳ್ಳಬೇಕು” ಇಂತಹ ಸಂವಿಧಾನ ವಿರೋಧಿ ಹೇಳಿಕೆಯ ಮುಂದುವರೆದ ಭಾಗವೇ “ಹಿಂದೂ ರಾಷ್ಟ್ರಕ್ಕಾಗಿ” “ಪ್ರತ್ಯೇಕ ಸಂವಿಧಾನ” ರಚಿಸಿರುವುದು ಸ್ಪಷ್ಟ. ಮನುಸ್ಮೃತಿಯನ್ನೇ ಆಧಾರವಾಗಿಕೊಟ್ಟಿಕೊಂಡು ಸಂವಿಧಾನ ರಚಿಸಲಾಗಿದೆ ಎನ್ನಲಾಗಿರುವುದು, ಮಹಿಳೆಯರು ಹಾಗೂ ದಲಿತ, ಶೋಷಿತ ಸಮುದಾಯಗಳ ಮರಣ ಶಾಸನವೇ ಆಗಿರುವುದರಲ್ಲಿ ಯಾವ ಅನುಮಾನವೂ ಇಲ್ಲ. “ಹಿಂದೂ ರಾಷ್ಟ್ರ” ಕ್ಕೆ “ಪ್ರತ್ಯೇಕ ಸಂವಿಧಾನ” ರಚನೆ ಮಾಡಲು ಗುಪ್ತವಾಗಿಯೇ ತಯಾರಿ ನಡೆದಂತಿದೆ. ಫೆಬ್ರವರಿ 3ರಂದು ಸಂಪೂರ್ಣ 501 ಪುಟಗಳು ಬಹಿರಂಗವಾಗಲಿದೆ ಎನ್ನಲಾಗಿದ್ದು, ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಯಾವ ಕಾರಣಕ್ಕೂ ಬಹಿರಂಗಗೊಳ್ಳದಂತೆ ಹಾಗೂ ದೇಶದ ಸ್ವಾಸ್ಥ್ಯವನ್ನು ಹಾಳುಗೆಡವದಂತೆ ಕ್ರಮ ತೆಗೆದುಕೊಳ್ಳಬೇಕಿದೆ.
