ನವದೆಹಲಿ : ಮುದ್ರಾ ಯೋಜನೆಯ ಸಾಲ ಲಕ್ಷಾಂತರ ಜನರ ಕನಸುಗಳಿಗೆ ರೆಕ್ಕೆ ತಂದಿದೆ. ಇದು ಕೇವಲ ಸಾಲದ ಯೋಜನೆಯಷ್ಟೇ ಅಲ್ಲ, ಇದು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಸಾಧನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಈ ಯೋಜನೆ 10 ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆಯ ಹಿನ್ನೆಲೆ ಮೋದಿ ಅವರು ತಮ್ಮ ನಿವಾಸದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಸಭೆಯಲ್ಲಿ ಉದ್ಯಮಿಗಳಿಂದ ಅಭಿಪ್ರಾಯ ಸಂಗ್ರಹಿಸಿದರು.
ಸಂವಾದದಲ್ಲಿ ಭಾಗವಹಿಸಿದ ಫಲಾನುಭವಿಗಳೊಂದಿಗೆ ಮಾತನಾಡಿದ ಅವರು, ಮುದ್ರಾ ಯೋಜನೆಯು ಕಳೆದ 10 ವರ್ಷಗಳಲ್ಲಿ ಲಕ್ಷಾಂತರ ಜನರ ಕನಸುಗಳಿಗೆ ರೆಕ್ಕೆ ತಂದಿದೆ. ಸಣ್ಣ ಉದ್ಯಮಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಈ ಯೋಜನೆ ಸಹಾಯ ಮಾಡಿದೆ ಎಂದರು.
ಈ ಯೋಜನೆಯ ಮೂಲಕ ದೇಶದ ಆರ್ಥಿಕತೆಗೆ ಸಣ್ಣ ಉದ್ಯಮಿಗಳ ಕೊಡುಗೆಯನ್ನು ಶ್ಲಾಘಿಸಿದ ಅವರು, ಭವಿಷ್ಯದಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ತಮ್ಮ ಉದ್ದೇಶವನ್ನು ಸಹ ವ್ಯಕ್ತಪಡಿಸಿದರು. ನಮ್ಮ ಗುರಿ ಪ್ರತಿಯೊಬ್ಬ ಭಾರತೀಯನನ್ನು ಸಬಲರನ್ನಾಗಿ ಮಾಡುವುದು. ಮುದ್ರಾ ಯೋಜನೆಯ ಮೂಲಕ ನಾವು ಆ ದಿಕ್ಕಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದರು.