ನವದೆಹಲಿ: ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಚರ್ಚೆ ವೇಳೆ ಮಾಜಿ ಪ್ರಧಾನಮಂತ್ರಿ ಜವಾಹಲ್ ಲಾಲ್ ನೆಹರು ಅವರನ್ನು ಟೀಕಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ.
ನಿನ್ನೆ ಲೋಕಸಭೆಯಲ್ಲಿ ಜವಾಹರಲಾಲ್ ನೆಹರು ಕುರಿತು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರೂ ಮಾತನಾಡಿದ್ದನ್ನು ನೋಡಿದರೆ, ಅವರು ವೈದ್ಯಕೀಯ ಭಾಷೆಯಲ್ಲಿ ಕರೆಯುವ ಒಸಿಡಿ (ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್) ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆಂಬುದನ್ನು ತೋರಿಸುತ್ತಿದೆ.
ರಾಜ್ಯಸಭೆಯಲ್ಲಿಯೂ ಇದು ಪುನರಾವರ್ತನೆಯಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ವಾಗ್ದಾಳಿ ನಡೆಸಿದ್ದಾರೆ.
ಇಂದಿನ ವೈಫಲ್ಯಗಳಿಗೆ ಅವರ ಬಳಿ ಉತ್ತರವಿಲ್ಲ, ಹೀಗಾಗಿ, ದಿಕ್ಕು ತಪ್ಪಿಸುವ, ಗಮನ ಬೇರೆಡೆ ಸೆಳೆಯುವ ಹಾಗೂ ಮಾನಹಾನಿ ಮಾಡುವ ಕೆಲಸ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಗೃಹಸಚಿವ ಅಮಿತ್ ಶಾ ತಾವೊಬ್ಬ ಇತಿಹಾಸಕಾರ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಆದರೆ, ಅವರು ಭಾರತದ 2ನೇ ವಿಕೃತ ಇತಿಹಾಸಕಾರ. ಇದು ಎಂಟೈರ್ ಪೊಲಿಟಿಕಲ್ ಸೈನ್ಸ್ನಲ್ಲಿ ಪದವಿ ಪಡೆದ ವ್ಯಕ್ತಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತಾದ ಚರ್ಚೆಯಲ್ಲಿ ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಜವಾಹರಲಾಲ್ ನೆಹರು ನೇತೃತ್ವದ ಕಾಂಗ್ರೆಸ್ ಸರ್ಕಾರ ಅಕ್ಸಾಯ್ ಚಿನ್‌ನ 38,000 ಕಿ.ಮೀ.ಗೂ ಹೆಚ್ಚು ಪ್ರದೇಶವನ್ನು ಕಳೆದುಕೊಂಡಿತು. ಪಾಕ್ ಜೊತೆ ಸಿಂಧೂ ನದಿ ನೀರು ಒಪ್ಪಂದಕ್ಕೆ ಸಹಿ ಹಾಕಿ ದೊಡ್ಡ ತಪ್ಪು ಮಾಡಿದ್ದರು ಎಂದು ಟೀಕಿಸಿದ್ದರು.
ಪಿಒಕೆಯನ್ನು ಇನ್ನೂ ಯಾಕೆ ವಾಪಸ್ ಪಡೆದಿಲ್ಲ ಎಂದು ಕೇಳುವ ಮೊದಲು ಕಾಂಗ್ರೆಸ್ ಮೊದಲು ಅದನ್ನು ಯಾಕೆ ಬಿಟ್ಟು ಕೊಟ್ಟಿತ್ತು. ನೆಹರೂ ಅವರಿಂದ ಹಿಡಿದು ಎಲ್ಲಾ ಕಾಂಗ್ರೆಸ್ ಸರ್ಕಾರಗಳು ಮಾಡಿದ ತಪ್ಪುಗಳ ನೋವನ್ನು ಭಾರತ ಇನ್ನೂ ಅನುಭವಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು
ಇದೇ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅಮಿತ್ ಶಾ ಅವರು, ನೆಹರೂ ಅವರನ್ನು ತೀವ್ರವಾಗಿ ಟೀಕಿಸಿದರು.1948ರಲ್ಲಿ ನಮ್ಮ ಸಶಸ್ತ್ರ ಪಡೆಗಳು ನಿರ್ಣಾಯಕ ಹಂತದಲ್ಲಿದ್ದವು. ಸರ್ದಾರ ಪಟೇಲ್ ಬೇಡ ಅಂದ್ರು ನೆಹರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಕದನ ವಿರಾಮ ಘೋಷಿಸಿದ್ದರು. ಪಾಕ್ ಆಕ್ರಮಿತ ಕಾಶ್ಮೀರ ಇಂದು ಅಸ್ತಿತ್ವದಲ್ಲಿದೆ ಎಂದರೆ ಅದು ನೆಹರು ಘೋಷಿಸಿದ ಈ ಏಕಪಕ್ಷೀಯ ಕದನ ವಿರಾಮದಿಂದಾಗಿ. ಪಿಓಕೆ ಸೃಷ್ಟಿಗೆ ಜವಾಹರಲಾಲ್ ನೆಹರು ಅವರೇ ಕಾರಣ ಎಂದು ಹೇಳಿದರು.