ನವದೆಹಲಿ: ಹಾಸನ ತಾಲೂಕಿನ ಮೊಸಳೆಹಳ್ಳಿ ಸಮೀಪ ಗಣೇಶೋತ್ಸವ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಡಿದವರಿಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಹಾಸನದಲ್ಲಿ ನಡೆದ ದುರಂತ ಹೃದಯವಿದ್ರಾವಕ. ಮೃತರ ಕುಟುಂಬಗಳ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಬರೆದಿದ್ದಾರೆ. ಪಿಎಂ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರಿಗೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಧನವನ್ನೂ ಘೋಷಣೆ ಮಾಡಿದ್ದಾರೆ.
ಗಾಯಾಳುಗಳ ಚಿಕಿತ್ಸೆಗೆ ತಜ್ಞ ವೈದ್ಯರ ತಂಡವನ್ನು ಕಳುಹಿಸಲಾಗಿದ್ದು, ಅಗತ್ಯ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. ರಾತ್ರಿಯೇ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರ ಮಾಡಲಾಗಿದೆ. ಮತ್ತೊಂದೆಡೆ ಅಪಘಾತಕ್ಕೆ ಕಾರಣನಾದ ಕ್ಯಾಂಟರ್ ಚಾಲಕ ಭುವನ್ ವಿರುದ್ಧ ಗೊರೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕನ ಮಾಹಿತಿಯನ್ನು ಪೊಲೀಸರು ಬಹಿರಂಗ ಮಾಡಿಲ್ಲ.