ಪಾಟ್ನಾ : ವಿಧಾನಸಭೆ ಚುನಾವಣೆಗೆ ಮುನ್ನವೇ ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರ ಬಿಹಾರದ ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆ’ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಚಾಲನೆ ನೀಡಿದ್ದಾರೆ.
ಈ ಯೋಜನೆಯ ಮೂಲಕ ಬಿಹಾರದಾದ್ಯಂತ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು 7,500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ.
ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ಅವರ ಆಯ್ಕೆಯ ಜೀವನೋಪಾಯ ಚಟುವಟಿಕೆಗಳಿಗಾಗಿ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಬಲೀಕರಣವನ್ನು ಉತ್ತೇಜಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕೃಷಿ, ಪಶುಸಂಗೋಪನೆ, ಕರಕುಶಲ ವಸ್ತುಗಳು, ಟೈಲರಿಂಗ್, ನೇಯ್ಗೆ ಮತ್ತು ಇತರ ಸಣ್ಣ-ಪ್ರಮಾಣದ ಉದ್ಯಮಗಳನ್ನು ಮಹಿಳೆಯರು ನಡೆಸಬಹುದು, ನಂತರದ ಹಂತಗಳಲ್ಲಿ 2 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಆರ್ಥಿಕ ನೆರವು ದೊರೆಯುವ ಸಾಧ್ಯತೆ ಇದೆ.
ಯೋಜನೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಬಿಹಾರದ ಮಹಿಳೆಯರ ಸಂತೋಷದಲ್ಲಿ ಪಾಲ್ಗೊಳ್ಳಲು ನನಗೆ ಹರ್ಷವಾಗುತ್ತಿದೆ. ನಾನು ಪರದೆಯ ಮೇಲೆ ಲಕ್ಷಾಂತರ ಮಹಿಳೆಯರನ್ನ ನೋಡುತ್ತಿದ್ದೇನೆ. ಅವರ ಆಶೀರ್ವಾದ ನಮಗೆಲ್ಲರಿಗೂ ಶಕ್ತಿಯ ಮೂಲವಾಗಿದೆ. ಅವರೆಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದರು.
ಈ ವೇಳೆ ಮಾತನಾಡಿದ ಬಿಹಾರ ಸಿಎಂ ನಿತೀಶ್ ಕುಮಾರ್, “ಪ್ರಧಾನಿ ನಿಮಗಾಗಿ ಬಹಳಷ್ಟು ಕೆಲಸ ಮಾಡ್ತಿದ್ದಾರೆ. ಹಿಂದಿನ ಸರ್ಕಾರ ಮಹಿಳೆಯರ ಪರ ಇರಲಿಲ್ಲ. ಲಾಲು ಪ್ರಸಾದ್ ಯಾದವ್ ಪದಚ್ಯುತಗೊಳಿಸಿದಾಗ, ಅವರು ತಮ್ಮ ಪತ್ನಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಅವರು ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಿದ್ದರು. ಆದ್ರೆ ನಾವು ನಮ್ಮ ಕುಟುಂಬಗಳನ್ನ ನೋಡಿಕೊಳ್ಳುವುದಿಲ್ಲ, ಬದಲಾಗಿ ಇಡೀ ಬಿಹಾರಕ್ಕಾಗಿ ಕೆಲಸ ಮಾಡುತ್ತೇವೆ” ಎಂದರು.