ನವದೆಹಲಿ: ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ದೀಪಾವಳಿ ಹಬ್ಬವನ್ನು ಸೇರ್ಪಡೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ದೀಪಾವಳಿ ನಮ್ಮ ಸಂಸ್ಕೃತಿ ಮತ್ತು ನೀತಿಯ ಜೊತೆಗೆ ನಿಕಟ ಸಂಪರ್ಕ ಹೊಂದಿದೆ. ಇದು ನಾಗರೀಕತೆಯ ಆತ್ಮವಾಗಿದೆ. ಸದಾಚಾರ ಮತ್ತು ಜ್ಞಾನೋದಯವನ್ನು ಬಿಂಬಿಸುತ್ತದೆ. ಈ ವಿಚಾರ ಭಾರತ ಮತ್ತು ವಿಶ್ವದ ಜನರನ್ನು ರೋಮಾಂಚನಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯುನೆಸ್ಕೋ ಪಟ್ಟಿಗೆ ಸೇರಿರುವ ಕಾರಣ ದೀಪಾವಳಿಯ ಜಾಗತಿಕ ಜನಪ್ರಿಯತೆ ಹೆಚ್ಚಾಗಲು ಮತ್ತಷ್ಟು ಕೊಡುಗೆ ನೀಡಿದಂತಾಗಿದೆ. ಹಾಗೆಯೇ ಪ್ರಭು ಶ್ರೀರಾಮನ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸಿದ್ದಾರೆ.





























