ನವದೆಹಲಿ: ಪ್ರಧಾನಿ ಮೋದಿ ಅವರು ಪ್ರಧಾನಿ ಸ್ಥಾನವನ್ನು ಅಲಂಕರಿಸಿ 4078 ದಿನಗಳನ್ನು ಪೂರ್ಣಗೊಳಿಸಿ ದೀರ್ಘಾವಧಿ ಸೇವೆ ಸಲ್ಲಿಸಿದ ಭಾರತದ ಎರಡನೇ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾಗಿ ದಾಖಲೆ ಬರೆದಿದ್ದಾರೆ.
ಇಂದಿರಾ ಗಾಂಧಿ ಅವರು 4077 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು, ಈ ವರೆಗೆ ಜವಹರಲಾಲ್ ನೆಹರು (16 ವರ್ಷ 286 ದಿನಗಳು) ಅವರ ನಂತರ ಎರಡನೇ ಸ್ಥಾನದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ ಎಂದು ಗುರುತಿಸಿಕೊಳ್ಳುತ್ತಿದ್ದರು. ಆದರೆ ಈ ಹಿರಿಮೆ ಈಗ ಪ್ರಧಾನಿ ಮೋದಿ ಅವರಿಗೆ ವರ್ಗಾವಣೆಯಾಗಿದೆ.
ದೀರ್ಘಾವಧಿಯ ಸೇವೆ ಸಲ್ಲಿಸಿದ ಪ್ರಧಾನಿಗಳಲ್ಲಿ ಜವಹರಲಾಲ್ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಪ್ರಧಾನಿ ಮೋದಿ ಮತ್ತು ಇಂದಿರಾ ಗಾಂಧಿಗೆ ಮೂರನೇ ಸ್ಥಾನವಿದೆ. ಹಾಗೆಯೇ ಧೀರ್ಘಾವಧಿ ಪ್ರಧಾನಿಯಾಗಿ ಸೇವೆಸಲ್ಲಿಸಿದ ಕಾಂಗ್ರೆಸೇತರ ವ್ಯಕ್ತಿಯಾಗಿ ಪ್ರಧಾನಿ ಮೋದಿ ಗುರುತಿಸಿಕೊಂಡಿದ್ದಾರೆ.
ಪ್ರಧಾನಿ ಸ್ಥಾನಕ್ಕೇರುವ ಮೊದಲು ಪ್ರಧಾನಿ ಮೋದಿ ಅವರು ಸತತ ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.