ನವದೆಹಲಿ: ಭಾರತ-ಪಾಕಿಸ್ತಾನ “ಕದನ ವಿರಾಮಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಕುರಿತು ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಉಲ್ಲೇಖಿಸಿ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳಿರುವ ಪೋಸ್ಟ್ ಅನ್ನು ಟ್ಯಾಗ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 66 ದಿನಗಳಲ್ಲಿ 23 ಬಾರಿ ಪುನರಾವರ್ತನೆ ಆಗಿರುವುದಾಗಿ ತಿಳಿಸಿದ್ದಾರೆ.
ಜುಲೈ 21 ರಿಂದ ಸಂಸತ್ತು ಪುನರಾರಂಭವಾಗಲಿದ್ದು, ಪ್ರಧಾನಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸ್ಪಷ್ಟವಾಗಿ ಉತ್ತರಿಸಬೇಕಾಗಿದೆ. ಭಾರತ ಮತ್ತು ಪಾಕ್ ನಡುವಿನ ಕದನ ವಿರಾಮ ಜಾರಿ ಕುರಿತು ಟ್ರಂಪ್ ಹೇಳಿಕೆ ಕುರಿತು ರಾಷ್ಟ್ರವು ತಿಳಿದುಕೊಳ್ಳಲು ಬಯಸುತ್ತದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಪರಮಾಣು ಯುದ್ಧವಾಗಿ ಬದಲಾಗಬಹುದಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ವ್ಯಾಪಾರದ ಮೂಲಕ ನಿಲ್ಲಿಸಿದ್ದೇವೆ ಎಂದು ಟ್ರಂಪ್ ಸೋಮವಾರ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದರು.
ಅಮೆರಿಕ ಮಧ್ಯಸ್ಥಿಕೆಯಲ್ಲಿ ಸುದೀರ್ಘ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನವು ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಮೇ 10 ರಂದು ಘೋಷಿಸಿದಾಗಿನಿಂದಲೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಪರಿಹರಿಸಲು ನೆರವಾಗಿರುವುದಾಗಿ ಹಲವು ಸಂದರ್ಭಗಳಲ್ಲಿ ಅವರು ಹೇಳಿಕೊಂಡಿದ್ದಾರೆ.
ಆದರೆ ಎರಡು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ನಡುವಿನ ನೇರ ಮಾತುಕತೆಯ ನಂತರ ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ ಎಂದು ಭಾರತವು ನಿರಂತರವಾಗಿ ಸಮರ್ಥಿಸುತ್ತಿದೆ.
ಕಳೆದ ತಿಂಗಳು ಟ್ರಂಪ್ ಅವರೊಂದಿಗೆ ಸುಮಾರು 35 ನಿಮಿಷಗಳ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತವು ಮಧ್ಯಸ್ಥಿಕೆಯನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ದೃಢವಾಗಿ ಹೇಳಿದ್ದರು ಮತ್ತು ಪಾಕ್ ಕೋರಿಕೆಯ ಮೇರೆಗೆ ಮಿಲಿಟರಿ ಕ್ರಮ ನಿಲ್ಲಿಸುವ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ಚರ್ಚೆಯನ್ನು ಪ್ರಾರಂಭಿಸಲಾಯಿತು ಎಂದು ಭಾರತ ಹೇಳುತ್ತಿದೆ.
26 ನಾಗರಿಕರನ್ನು ಕೊಂದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಟ್ಟುಕೊಂಡು ಭಾರತ ಮೇ 7 ರಂದು ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆ ಆರಂಭಿಸಿತ್ತು.
ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಕದನ ವಿರಾಮ ಜಾರಿಗೆ ಸಮ್ಮತಿ ನೀಡಿದ್ದವು.