ಛತ್ತೀಸಗಢ : ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪಂಜಾಬ್‌ನ ಅದಂಪುರ ವಾಯುನೆಲೆಗೆ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದ್ದಾರೆ.
ಭಾರತದ ‘ಆಪರೇಷನ್ ಸಿಂಧೂರ’ ನಂತರ, ಮೇ 9 ಮತ್ತು 10 ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಅದಂಪುರವೂ ಸೇರಿತ್ತು. ನೀವು ನಮ್ಮ ಭಾರತದ ಹೆಮ್ಮೆಯ ಸಂಕೇತ. ನಿಮ್ಮ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅವರು ಸೈನಿಕರ ಗುಣಗಾನ ಮಾಡಿದರು.
ನಮ್ಮ ಸಶಸ್ತ್ರ ಪಡೆಗಳು ನಮ್ಮ ರಾಷ್ಟ್ರಕ್ಕಾಗಿ ಮಾಡುವ ಎಲ್ಲದಕ್ಕೂ ಭಾರತವು ಅವರಿಗೆ ಶಾಶ್ವತವಾಗಿ ಕೃತಜ್ಞರಾಗಿರಬೇಕು” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಅವರೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ 7 ರಂದು ಪ್ರಾರಂಭಿಸಲಾದ ಯಶಸ್ವಿ ‘ಆಪರೇಷನ್ ಸಿಂಧೂರ’ ನಂತರ ದೇಶದ ಬಲಿಷ್ಠ ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸಿದ ನಂತರ ಪ್ರಧಾನಿಯವರು ವಾಯುಪಡೆ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ.