ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಉತ್ತರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ‘ತಮಾಷೆ’ ಎಂದು ವ್ಯಂಗ್ಯ ಮಾಡಿದ ಕಾಂಗ್ರೆಸ್ ಅನ್ನು ಪ್ರಧಾನಿ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ವಾರಣಾಸಿಯಲ್ಲಿ ಮಾತನಾಡಿದ ಅವರು, ಭಾರತದ ಕಾರ್ಯಾಚರಣೆಯಿಂದ ಪಾಕಿಸ್ತಾನ ಅಸಮಾಧಾನಗೊಂಡಿದೆ ಎಂದು ಎಲ್ಲರಿಗೂ ತಿಳಿದಿದೆ. ಪಾಕಿಸ್ತಾನದ ಈ ನೋವನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಸಹಿಸಲಾಗುತ್ತಿಲ್ಲ. ಅಳುತ್ತಿರುವ ಪಾಕ್ ಅನ್ನು ನೋಡಿ ಇಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದವರು ಅಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಆಪರೇಷನ್ ಸಿಂಧೂರ್ ಅನ್ನು ತಮಾಷೆ ಎಂದು ಹೇಳುವ ಮೂಲಕ ದೇಶದ ವೀರ ಯೋಧರಿಗೆ ಕಾಂಗ್ರೆಸ್ ಅವಮಾನ ಮಾಡಿದೆ. ಕಾಂಗ್ರೆಸ್ ನಮ್ಮ ಯೋಧರನ್ನು ಅವಮಾನಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದೆ. ಉಗ್ರರನ್ನು ಕೊಲ್ಲುವ ಮೊದಲು, ಅವರ ವಿರುದ್ಧ ಕಾರ್ಯಾಚರಣೆ ಮಾಡುವ ಮೊದಲು ನಾವು ಅವರ ಅನುಮತಿ ಪಡೆಯಬೇಕೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.