ಟಿಯಾಂಜಿನ್: ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಸ್ಥೆ ಸದಸ್ಯರ ಅಧಿವೇಶನದಲ್ಲಿ ಭಯೋತ್ಪಾದನೆಯ ವಿರುದ್ಧ ತಮ್ಮ ಬಲವಾದ ಸಂದೇಶವನ್ನು ಸಾರಿದ್ದಾರೆ.
ಉಗ್ರವಾದವನ್ನು ಇಡೀ ಮಾನವೀಯತೆಗೆ ಸವಾಲು ಎಂದು ಅವರು ಹೇಳಿದ್ದು, ಈ ಅಪಾಯದಿಂದ ಯಾವುದೇ ದೇಶ ಸುರಕ್ಷಿತವಾಗಿದೆ ಎಂದು ತೀರ್ಮಾನಿಸಲು ಅಸಾಧ್ಯ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾವೆಲ್ಲರೂ ಸರ್ವಾನುಮತದಿಂದ ಭಯೋತ್ಪಾದನೆಯ ಬಗ್ಗೆ ದ್ವಂದ್ವ ಮಾನದಂಡ ಸ್ವೀಕಾರಾರ್ಹ ಅಲ್ಲ ಎಂದು ಹೇಳಬೇಕಾಗಿದೆ. ಪ್ರತ್ಯೇಕವಾದ, ಉಗ್ರ ವಾದ, ಉಗ್ರರಿಗೆ ಹಣಕಾಸು ಬೆಂಬಲ ನೀಡುವುದರ ವಿರುದ್ಧ ಒಗ್ಗಟ್ಟಾಗಿ SCO ರಾಷ್ಟ್ರಗಳು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿಯ ಬಗೆಗೂ ಮಾತನಾಡಿರುವ ಅವರು ಭಾರತ ಉಗ್ರವಾದದ ಹೊಡೆತವನ್ನು ಕಳೆದ ನಾಲ್ಕು ದಶಕಗಳಿಂದಲೂ ಅನುಭವಿಸಿಕೊಂಡು ಬಂದಿದೆ. ಪಹಲ್ಗಾಮ್‌ನಲ್ಲಿ ನಾವು ಉಗ್ರವಾದದ ಕೆಟ್ಟ ಮುಖವನ್ನು ಕಂಡಿದ್ದೇವೆ. ಈ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ಎಲ್ಲಾ ಸ್ನೇಹಪರ ರಾಷ್ಟ್ರಗಳಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪಾಕಿಸ್ತಾನವನ್ನು ಸಹ ತರಾಟೆಗೆ ತೆಗೆದುಕೊಂಡಿರುವ ಅವರು, ಉಗ್ರವಾದಕ್ಕೆ ಕೆಲವು ರಾಷ್ಟ್ರಗಳು ಬಹಿರಂಗವಾಗಿ ಬೆಂಬಲ ನೀಡುತ್ತಿದ್ದು, ಇದು ಸ್ವೀಕಾರಾರ್ಹವೇ ಎಂದು ಕೇಳಿದ್ದಾರೆ. ಈ ದಾಳಿ ಮಾನವೀಯತೆಯನ್ನು ನಂಬುವ ದೇಶ ಮತ್ತು ವ್ಯಕ್ತಿಗಳಿಗೆ ಬಹಿರಂಗ ಸವಾಲಾಗಿದೆ ಎಂದು ನುಡಿದಿದ್ದಾರೆ.