ಬೆಂಗಳೂರು : ಬಿಜೆಪಿ ಸ್ಕ್ರಿಪ್ಟ್ ಗೆ ನಾವು ಕುಣಿಯೋಕೆ ಆಗುತ್ತಾ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕಲಬುರಗಿಯಲ್ಲಿ ಪ್ರತಿಭಟನೆ ಮತ್ತು ರಾಜು ಕಪನೂರು ಸಹೋದರಿ ಕೇಂದ್ರಕ್ಕೆ ಪತ್ರ ಬರೆದ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸಿಐಡಿ ತನಿಖೆ ಶುರು ಆಗಿ ಎರಡು ದಿನ ಆಗಿದೆ. ಈಗಾಗಲೇ ಮಹಜರು ಮಾಡಿದ್ದಾರೆ ಪಾರದರ್ಶಕ ತನಿಖೆ ಸರ್ಕಾರದ್ದಾಗಿದೆ ಎಂದರು.
ಸಿಬಿಐ ತನಿಖೆಗೆ ಕೊಡಬೇಕು ಅಂತಾ ಬಿಜೆಪಿಯವ್ರು ಹೇಳಿದಾಗೆಲ್ಲಾ ಕೇಳಲು ಆಗಲ್ಲ. ಇವರ ಅವಧಿಯಲ್ಲಿ ಗಂಗಾ ಕಲ್ಯಾಣ ಹಗರಣ ಕೊಟ್ಟಿದ್ರಾ, ಪಿಎಸ್ ಐ ಹಗರಣ ಕೊಟ್ಟಿದ್ರಾ ಇವರ ಅವಧಿಯಲ್ಲಿ ಎಷ್ಟು ಕೇಸ್ ಸಿಬಿಐಗೆ ಕೊಟ್ಟಿದ್ದಾರೆ ? ಮಾನವ ಸಂಪನ್ಮೂಲ ಇಲ್ಲ ಸುಮ್ಮನೆ ಕೊಡಬೇಡಿ ಅಂತಾ ಸಿಬಿಐನವರೇ ಹೇಳಿದ್ದಾರೆ. ಇವರು ಹೇಳಿದಂತೆ ಮಾಡೋಕೆ ಇರೋದಾ ನಾವು? ಅವ್ರ ಸ್ಕ್ರಿಪ್ಟ್ ಗೆ ನಾವು ಕುಣಿಯೋಕೆ ಆಗುತ್ತಾ ? ವಿರೋಧ ಪಕ್ಷದಲ್ಲಿ ಇದ್ದವರು ಜವಾಬ್ದಾರಿಯುತವಾಗಿ ಇರಬೇಕು ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು. ಮೃತ ಸಚಿನ್ ಕುಟುಂಬಕ್ಕೆ ಪ್ರತಿಭಟನೆಗೆ ಬನ್ನಿ ಅಂತಾ ಅವರ ಕುಟುಂಬವನ್ನ ಫೋರ್ಸ್ ಮಾಡ್ತಿದ್ದಾರೆ, ಪದೇ ಪದೇ ಫೋನ್ ಮಾಡಿ ಸರ್ಕಾರದ ವಿರುದ್ಧ ಸ್ಟೇಟ್ ಮೆಂಟ್ ಕೇಳ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬಕ್ಕೆ ಬಿಜೆಪಿಯವರು ಸಹಾಯ ಮಾಡಬೇಕಿತ್ತು, ಮಾಡಿದ್ರಾ? ವಿಜಯೇಂದ್ರ ಹೋಗಿದ್ರಾ, ಎಷ್ಟು ಸಲ ಹೋಗಿದ್ರು ? ರಾಜಕೀಯ ಬೆರೆಸದೇ ಅವ್ರ ಕುಟುಂಬಕ್ಕೆ ನ್ಯಾಯ ಕೊಡಿಸೋದು ನಮ್ಮ ಜವಾಬ್ದಾರಿ ಎಂದರು.