ಬೆಂಗಳೂರು : ಸುವರ್ಣ ವಿಧಾನಸೌಧದ ಪ್ರತಿ ಕುರ್ಚಿಯ ಮೇಲೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಿರುವ ಫೋಟೊವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಿಜೆಪಿ ಮತ್ತು ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿರೋಧಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಕರ್ನಾಟಕ ವಿಧಾನಸಭೆಯ ಪ್ರತಿ ಕುರ್ಚಿಗಳೂ ಅಂಬೇಡ್ಕರ್ ಹೆಸರು ಹೇಳುತ್ತಿವೆ. ಅಮಿತ್ ಶಾ ಮತ್ತು ಬಿಜೆಪಿಗೆ ಈ ಫ್ಯಾಷನ್‌ನಿಂದ ಸಮಸ್ಯೆಯೇ?’ ಎಂದು ಪ್ರಶ್ನಿಸಿದ್ದಾರೆ.
ದೇವರ ನಾಮವನ್ನು ಸ್ಮರಿಸುವುದರಿಂದ ಏಳು ಜನ್ಮದಲ್ಲಿ ಸ್ಮರ್ಗ ಸಿಗುವುದಿಲ್ಲ ಎಂಬ ಗ್ಯಾರಂಟಿಯನ್ನು ನಾನು ನಿಮಗೆ (ಅಮಿತ್ ಶಾ) ನೀಡುತ್ತೇನೆ. ಆದರೆ, ಅಂಬೇಡ್ಕರ್ ಹೆಸರು ಹೇಳುವುದರಿಂದ ಈ ಜನ್ಮದಲ್ಲಿ ವಂಚಿತ ವರ್ಗಗಳು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸಬಲೀಕರಣಗೊಂಡು ಘನತೆಯ ಬದುಕು ಹೊಂದಲು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅಂಬೇಡ್ಕರ್ ನಾಮವನ್ನು ಜಪಿಸುವುದರ ಮೂಲಕ ನಾವು ಮನುಸ್ಮೃತಿಯಿಂದ ಮುಕ್ತಿ ಹೊಂದಲು ಸಾಧ್ಯವಾಯಿತು ಎಂದು ಪೋಸ್ಟ್ ಮಾಡಿದ್ದಾರೆ.