ಕೇರಳ: ಇಂದು ವಯನಾಡು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಅಭ್ಯರ್ಥಿ ಸತ್ಯನ್ ಮೊಕೇರಿ ಮತ್ತು ಎನ್ಡಿಎ ಅಭ್ಯರ್ಥಿ ನವ್ಯಾ ಹರಿದಾಸ್ ವಿರುದ್ಧ ದಾಖಲೆ ಮಟ್ಟಕ್ಕೆ ಭಾರೀ ಅಂತರದಲ್ಲಿ ಗೆಲುವು ದಾಖಲಿಸಿರುವ ಪ್ರಿಯಾಂಕಾ ಗಾಂಧಿ, 3 ಲಕ್ಷ ಮತಗಳ ಅಂತರದಲ್ಲಿ ಭರ್ಜರಿ ಪೈಪೋಟಿ ಕೊಟ್ಟು, ಇದೀಗ ಗೆಲುವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಸಹೋದರ ರಾಹುಲ್ ಗಾಂಧಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ಬೆನ್ನಲ್ಲೇ ತಮ್ಮ ಚೊಚ್ಚಲ ಪೈಪೋಟಿಯನ್ನು ವಯನಾಡಿನಿಂದ ಆರಂಭಿಸಿದ ವಾದ್ರಾಗೆ ಇದೀಗ ಊಹೆಗೂ ಮೀರಿದ ಗೆಲುವು ಸಿಕ್ಕಿದೆ.
ಮಧ್ಯಾಹ್ನ 12:30ರ ಹೊತ್ತಿಗೆ ಪ್ರಿಯಾಂಕಾ ಗಾಂಧಿ 5 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದು, 3.47 ಲಕ್ಷ ಮತಗಳ ಅಂತರದಿಂದ ಮುನ್ನಡೆ ಸಾಧಿಸಿ, ವಯನಾಡಿನಲ್ಲಿ ಗೆದ್ದು ಬೀಗಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸತ್ಯನ್ ಮೊಕೇರಿ 1.7 ಲಕ್ಷಕ್ಕೂ ಹೆಚ್ಚು ಮತಗಳಿಂದ ಎರಡನೇ ಸ್ಥಾನಕ್ಕೆ ಕುಸಿದರೆ, ಬಿಜೆಪಿಯ ನವ್ಯಾ ಹರಿದಾಸ್ ಸುಮಾರು 95,000 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಒಟ್ಟಾರೆ ಬಹುಮತಗಳ ಅಂತರದಿಂದ ಗೆಲುವು ಕಂಡಿರುವ ಪ್ರಿಯಾಂಕಾ ಗಾಂಧಿ, ವಯನಾಡಿನತ್ತ ಮುಖ ಮಾಡಿದ್ದಾರೆ.