ಚಿತ್ರದುರ್ಗ : ಪ್ರಜಾಪ್ರಭುತ್ವದಲ್ಲಿ ಜನತಂತ್ರ ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಿರೇಹಳ್ಳಿ ಮಲ್ಲಿಕಾರ್ಜುನ್ರವರು ಜನತಂತ್ರ ಉಳಿಸಿ ಆಂದೋಲನ ಮಿಷನ್ ವತಿಯಿಂದ ಸ್ಪರ್ಧಿಸಲಿದ್ದಾರೆಂದು ಪ್ರೊ.ಸಿ.ಕೆ.ಮಹೇಶ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನತಂತ್ರ ಉಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಚುನಾವಣೆ ಧನ ತಂತ್ರವಾಗಿ ಪರಿವರ್ತನೆಯಾಗಿದೆ. ಕಾರ್ಪೊರೇಟರ್ಗಳು ಬಂದಾಗ ಜನತಂತ್ರದ ಮೂಲ ಆಶಯಗಳು ನಾಶವಾಗುತ್ತಿದೆ. ಮುಂದಿನ ತಲೆಮಾರು ಜನತಂತ್ರವನ್ನು ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಚುನಾವಣೆಯಲ್ಲಿ ಕೋಟಿಗಳ ಖರ್ಚಾಗುತ್ತಿದೆ. ಜನತಂತ್ರ ಉಳಿಸುವುದಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಕಮಿಟಿಗಳನ್ನು ರಚಿಸಿದ್ದೇವೆಂದರು.
ಡಾ.ವಿ.ಬಸವರಾಜ್ ಮಾತನಾಡಿ ಮತಗಳು ಮೌಲ್ಯವನ್ನು ಕಳೆದುಕೊಳ್ಳಬಾರದೆನ್ನುವುದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ಉದ್ದೇಶ. ಪದವೀಧರ ಕ್ಷೇತ್ರದಲ್ಲಿ ಮತಗಳು ಮಾರಾಟಕ್ಕಿಲ್ಲ ಎನ್ನುವ ಸಂದೇಶ ನೀಡಿ ಪದವೀಧರರಲ್ಲಿ ಜಾಗೃತಿ ಮೂಡಿಸುವ ಶಿಬಿರ ನಡೆಸುತ್ತಿದ್ದೇವೆಂದು ಹೇಳಿದರು.
ಚುನಾವಣೆಯಲ್ಲಿ ಪದವೀಧರರನ್ನು ಕೊಂಡುಕೊಳ್ಳುವ ವ್ಯವಸ್ಥೆ ಬದಲಾಗಬೇಕು. ಅದಕ್ಕಾಗಿ ಈ ಚುನಾವಣೆಯಲ್ಲಿ ಹಿರೇಹಳ್ಳಿ ಮಲ್ಲಿಕಾರ್ಜುನ್ ಸ್ಪರ್ಧಿಸಲಿದ್ದಾರೆಂದರು.
ಜನತಂತ್ರ ಉಳಿಸಿ ಆಂದೋಲನದ ಹಿರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡುತ್ತ ಅಂಬೇಡ್ಕರ್ ಸಿದ್ದಾಂತ, ಕಾನ್ಷಿರಾಂರವರ ಪ್ರಯೋಗ ಮಾಡುವ ಮೂಲಕ ಚುನಾವಣೆಗೆ ಸ್ಪರ್ಧಿಸಲಿದ್ದೇನೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಈಗಾಗಲೆ ಪ್ರವಾಸ ಕೈಗೊಂಡಿದ್ದೇವೆ. ಪದವೀಧರರು ಬೇಸತ್ತಿದ್ದಾರೆ.
ಯುವ ಜನಾಂಗಕ್ಕೆ ಪ್ರೇರಣೆಯಾಗಲು ಗಂಭೀರವಾಗಿ ಪ್ರಯತ್ನಿಸುತ್ತಿದ್ದೇವೆ. ಅದಕ್ಕಾಗಿ ಪದವೀಧರರು ತಪ್ಪದೆ ಹೆಸರುಗಳನ್ನು ನೊಂದಾಯಿಸಿಕೊಳ್ಳಿ ಎಂದು ಮನವಿ ಮಾಡಿದರು.
ಡಿ.ದುರುಗೇಶಪ್ಪ, ಎ.ರಾಮುಗೋಸಾಯಿ, ಬಾಲೇನಹಳ್ಳಿ ರಾಮಣ್ಣ, ಸಿ.ಆರ್.ಪ್ರಭಾಕರ್, ಸಿ.ಎ.ಚಿಕ್ಕಣ್ಣ, ಕೆ.ಕುಮಾರ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
				
															
                    
                    
                    
                    































