ಕರ್ನಾಟಕ ಸರ್ಕಾರವು ಆಸ್ತಿ ನೋಂದಣಿ ಶುಲ್ಕವನ್ನು ದುಪ್ಪಟ್ಟು ಮಾಡಿದೆ. ಆಸ್ತಿಗಳ ನೋಂದಣಿ ಶುಲ್ಕವನ್ನು ಹೆಚ್ಚಳ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ನಾಳೆಯಿಂದ ಅಂದರೆ ಆಗಸ್ಟ್ 31ರಿಂದ ಪರಿಷ್ಕೃತ ಆಸ್ತಿ ನೋಂದಣಿ ಶುಲ್ಕ ಜಾರಿಗೆ ಬರಲಿದೆ.
ರಾಜ್ಯದಲ್ಲಿ ಈವರೆಗೂ ನಿವೇಶನ, ಭೂಮಿ, ಫ್ಲ್ಯಾಟ್, ಮನೆ ಸೇರಿದಂತೆ ಸ್ಥಿರಾಸ್ತಿ ಖರೀದಿ ವೇಳೆ ಶೇ.1ರಷ್ಟು ನೋಂದಣಿ ಶುಲ್ಕ ಹಾಗೂ ಶೇ.5.6ರಷ್ಟು ಮುದ್ರಾಂಕ ಶುಲ್ಕ ಸೇರಿ ಶೇ.6.6ರಷ್ಟು ಶುಲ್ಕ ಇತ್ತು. ಆದರೆ ಈಗ ಏರಿಕೆಯಿಂದ ಒಟ್ಟು ಶೇ.7.6ರಷ್ಟು ಶುಲ್ಕ ಕಟ್ಟಬೇಕು. ಈ ಕುರಿತಾಗಿ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಎಲ್ಲಾ ಉಪ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಆಸ್ತಿ ನೋಂದಣಿ ಶುಲ್ಕ ಶೇ.1ರಿಂದ ಶೇ.2ರಷ್ಟು ಏರಿಕೆ ಮಾಡಲಾಗಿದ್ದು, ಆ.31ರಿಂದ ಅನ್ವಯವಾಗಲಿದೆ. ಸ್ವಾಧೀನ ಭೋಗ್ಯ ಪತ್ರ, ಸ್ಥಿರಾಸ್ತಿ ಶುದ್ಧ ಕ್ರಯ ಪತ್ರ ಸೇರಿದಂತೆ ವಿವಿಧ ಆಸ್ತಿ ಖರೀದಿ ನೋಂದಣಿಗೆ ಈ ಶುಲ್ಕ ಅನ್ವಯವಾಗಲಿದೆ. 2024-25 ಮತ್ತು 2025-26 ರ ಮೊದಲ ತ್ರೈಮಾಸಿಕದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದಾಯದ ಗುರಿಗಳನ್ನು ತಲುಪುವಲ್ಲಿ ತೀವ್ರ ಕುಸಿತ ಕಂಡು ಬಂದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.