ಡೆಹ್ರಾಡೂನ್ : ಕೇದಾರನಾಥ ಮಾರ್ಗದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಸಿಲುಕಿಕೊಂಡಿದ್ದ ಸುಮಾರು 800 ಯಾತ್ರಿಕರನ್ನು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡಗಳು ರಕ್ಷಣೆ ಮಾಡಿವೆ.
ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಭಾರೀ ಮಳೆಯಿಂದಾಗಿ ರುದ್ರಪ್ರಯಾಗ-ಕೇದಾರನಾಥ ಸಂಪರ್ಕಿಸುವ 107ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆ ಗೌರಿಕುಂಡ್‌ನಿಂದ ಸೋನ್‌ಪ್ರಯಾಗ್‌ಗೆ ಸಂಪರ್ಕಿಸುವ ಪ್ರಮುಖ ರಸ್ತೆಯ 50 ಮೀ. ಭಾಗವು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.
ಗೌರಿಕುಂಡ್‌ನಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಮುಂಕಟಿಯಾ ಸ್ಲೈಡಿಂಗ್ ಝೋನ್ ಬಳಿ ಭೂಕುಸಿತ ಸಂಭವಿಸಿದೆ. ಈ ವೇಳೆ ಸಾವಿರಾರು ಯಾತ್ರಿಕರು ಸಿಲುಕಿಕೊಂಡಿದ್ದರು. ಕೂಡಲೇ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡದ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ, ಯಾತ್ರಿಕರನ್ನು ಸುರಕ್ಷಿತವಾಗಿ ಸೋನ್‌ಪ್ರಯಾಗ್‌ಗೆ ಸ್ಥಳಾಂತರಿಸಿದರು. ಭೂಕುಸಿತದಿಂದಾಗಿ ಕೇದಾರನಾಥ ಯಾತ್ರೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ರಸ್ತೆಯನ್ನು ಸರಿಪಡಿಸಲು ಕನಿಷ್ಠ 2-3 ದಿನಗಳು ಬೇಕಾಗಬಹುದು ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಕೆ.ರಾಜ್‌ವಾರ್ ಅವರು ಮಾಹಿತಿ ನೀಡಿದ್ದಾರೆ.
ಮಳೆಯಿಂದಾಗಿ ಉತ್ತರಾಖಂಡದಾದ್ಯಂತ ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿ ಒಟ್ಟು 94 ರಸ್ತೆಗಳು ಬಂದ್ ಆಗಿವೆ. ಸದ್ಯ ಎಸ್‌ಡಿಆರ್‌ಎಫ್ ಪರ್ಯಾಯ ಮಾರ್ಗದ ಮೂಲಕ ಯಾತ್ರಿಕರ ಸಂಚಾರವನ್ನು ಸುಗಮಗೊಳಿಸುತ್ತಿದೆ. ಈ ಋತುವಿನಲ್ಲಿ ಇದುವರೆಗೆ 14.4 ಲಕ್ಷಕ್ಕೂ ಅಧಿಕ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಜು.29ರಂದು ಒಂದೇ ದಿನದಲ್ಲಿ 2,253 ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ತಿಳಿಸಿದೆ.