ಚಿತ್ರದುರ್ಗ : ನಗರಸಭೆ ವ್ಯಾಪ್ತಿಗೊಳಪಡುವ ಫುಟ್ಪಾತ್ ವ್ಯಾಪಾರಿಗಳಿಂದ ಮನಸೋ ಇಚ್ಚೆ ಜಕಾತಿ ವಸೂಲು ಮಾಡುತ್ತಿರುವುದನ್ನು ವಿರೋಧಿಸಿ ಕರುನಾಡ ವಿಜಯಸೇನೆಯಿಂದ ನಗರಸಭೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಬೀದಿ ಬದಿ ವ್ಯಾಪಾರಸ್ಥರು, ಹೂವು, ಹಣ್ಣು, ತರಕಾರಿ ಹಾಗೂ ಡಬ್ಬದಂಗಡಿಗಳವರಿಂದ ಜಕಾತಿ ವಸೂಲಿ ಮಾಡುತ್ತಿರುವುದರಿಂದ ಬಡವರು ಬದುಕುವುದು ಹೇಗೆ ಎಂದು ಪ್ರತಿಭಟನಾಕಾರರು ಪೌರಾಯುಕ್ತರನ್ನು ಪ್ರಶ್ನಿಸಿದರು.?
ಹೂವು, ಹಣ್ಣು, ತರಕಾರಿ, ಸೊಪ್ಪು ಹೀಗೆ ಯಾವ್ಯಾವ ವ್ಯಾಪಾರಿಗಳಿಂದ ಎಷ್ಟು ಜಕಾತಿ ವಸೂಲು ಮಾಡಬೇಕೆಂಬ ನಾಮಫಲಕವನ್ನು ಎಲ್ಲಿಯೂ ಅಳವಡಿಸಿಲ್ಲ.
ಉಲ್ಲೇಖ-2 ಪ್ರಕಾರ ಜಕಾತಿ ವಸೂಲು ಮಾಡದಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು ಸಹ ವಸೂಲಿ ಮಾತ್ರ ಇನ್ನು ನಿಂತಿಲ್ಲ. ಬರಪೀಡಿತ ಪ್ರದೇಶ ಚಿತ್ರದುರ್ಗದಲ್ಲಿ ಬೀದಿ ಬದಿಯಲ್ಲಿ ವ್ಯಾಪಾರಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವವರಿಂದ ಹೆಚ್ಚಿಗೆ ಜಕಾತಿ ವಸೂಲು ಮಾಡುತ್ತಿರುವವರ ಮೇಲೆ ಇದುವರೆವಿಗೂ ಏಕೆ ಕ್ರಮ ಕೈಗೊಂಡಿಲ್ಲ. ತಕ್ಷಣದಿಂದಲೆ ಜಕಾತಿ ವಸೂಲಾತಿ ನಿಲ್ಲಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಆಗ್ರಹಿಸಿದರು.
ಕರುನಾಡ ವಿಜಯಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಸಾಮಾಜಿಕ ಜಾಲತಾಣ ಘಟಕದ ಮಧು, ಉಪಾಧ್ಯಕ್ಷೆ ರತ್ನಮ್ಮ, ಮುಜಾಹಿದ್, ಜಗದೀಶ್, ಅಖಿಲೇಶ್, ಶಶಿ, ಬಾಬು, ಅವಿನಾಶ್, ನಾಗೇಶ್, ತಿಪ್ಪೇಸ್ವಾಮಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.