ಚಿತ್ರದುರ್ಗ : ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಸಂಸತ್ನಲ್ಲಿ ಅವಹೇಳನವಾಗಿ ಮಾತನಾಡಿರುವ ಗೃಹ ಸಚಿವ ಅಮಿತ್ಶಾರವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಭಾರತೀಯ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಅಮಿತ್ಶಾ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಭಾರತೀಯ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಹೆಚ್.ಪ್ರಕಾಶ್ ಬೀರಾವರ ಸಂವಿಧಾನ ಯಾವುದೇ ಒಂದು ಜಾತಿ ಧರ್ಮದವರಿಗಷ್ಟೆ ಸೀಮಿತವಲ್ಲ. ಎಲ್ಲರಿಗೂ ಸಮಾನವಾದ ಹಕ್ಕು ಸಿಕ್ಕಿದೆ. ಅಮಿತ್ಶಾ ಕೇಂದ್ರ ಗೃಹ ಸಚಿವರಾಗಿದ್ದಾರೆಂದರೆ ಸಂವಿಧಾನ ಕಾರಣ ಎನ್ನುವುದನ್ನು ಮರೆತು ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ನಾವುಗಳು ಸಹಿಸುವುದಿಲ್ಲ. ಕೂಡಲೆ ವಜಾಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಿ ಅಮಿತ್ಶಾ ಎಲ್ಲೆಲ್ಲಿ ಬರುತ್ತಾರೋ ಅಲ್ಲಿ ಘೇರಾವ್ ಹಾಕುವುದಾಗಿ ಎಚ್ಚರಿಸಿದರು.
ಭಾರತೀಯ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎನ್.ಪಾಂಡುರಂಗಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷ ಆರ್.ಮಂಜುನಾಥ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ
ವಾಸಿಕ್ ಅಹಮದ್, ತಾಲ್ಲೂಕು ಅಧ್ಯಕ್ಷ ಮಹಾಂತೇಶ್ ಟಿ.ಕಕ್ಕೇಹರವು, ನಗರಾಧ್ಯಕ್ಷ ಹರೀಶ್ ಎಂ.ಕೆ.ಹಟ್ಟಿ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಚಿದಾನಂದ, ರಾಜಶೇಖರ್
ಓಬವ್ವನಾಗ್ತಿಹಳ್ಳಿ, ಕರಿಯಪ್ಪ ಎನ್.ಚಿಕ್ಕಾಲಘಟ್ಟ, ಹೆಚ್.ರಾಜಪ್ಪ, ಕೆ.ಮೋಹನ್ಕುಮಾರ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿದ್ದರು.