ಬೆಳ್ತಂಗಡಿ: ಉಜಿರೆಯಲ್ಲಿ ಸೌಜನ್ಯ ಹೋರಾಟಗಾರ ಮಹೇಶ್ ತಿಮರೋಡಿ ಅವರ ಚಾಲೆಂಜ್ ಸ್ವೀಕರಿಸಿ ಉಜಿರೆಗೆ ಆಗಮಿಸಿದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ಪೊಲೀಸರು ದಾರಿ ಮಧ್ಯೆ ತಡೆಯನ್ನುಂಟುಮಾಡಿದ್ದಾರೆ.
ಉಜಿರೆಯಲ್ಲಿ ನಡೆಯುವ ರಾಮೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಪುನೀತ್ ಕೆರೆಹಳ್ಳಿಯವರನ್ನು ದ.ಕ ಜಿಲ್ಲೆ ಪ್ರವೇಶಿಸದಂತೆ ದ.ಕ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದು, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನೀಡಿದ್ದಾರೆ. ಪುನೀತ್ ಕೆರೆಹಳ್ಳಿ ಆಗಮನದಿಂದ ಜಿಲ್ಲೆಯಲ್ಲಿ ಶಾಂತಿ ಕದಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.
ಇಂದು ಸಂಜೆ ಉಜಿರೆಯಲ್ಲಿ ನಡೆಯಲಿರೋ ಶ್ರೀರಾಮೋತ್ಸವ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದು, ಇದೇ ಕಾರ್ಯಕ್ರಮಕ್ಕೆ ಆಗಮಿಸಲು ಪುನೀತ್ ಕೆರೆಹಳ್ಳಿ ಸಹ ಸಿದ್ದತೆ ನಡೆಸಿದ್ದರು.
ಸೌಜನ್ಯ ಪರ ಹೋರಾಟಗಾರರಿಂದ ಪುನೀತ್ ಕೆರೆಹಳ್ಳಿ ಆಗಮನಕ್ಕೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಪುನೀತ್ ಆಗಮಿಸಿದ್ರೆ ಉಜಿರೆಯಲ್ಲಿ ಶಾಂತಿ ಕದಡುವ ಸಾಧ್ಯತೆಯೊಂದಿಗೆ, ಮಹೇಶ್ ಶೆಟ್ಟಿ ತಿಮರೋಡಿ ಬಣ ಮತ್ತು ಪುನೀತ್ ಕೆರೆಹಳ್ಳಿ ಮಧ್ಯೆ ಸಂಘರ್ಷ ಉಂಟಾಗುವ ಸಾಧ್ಯತೆ ಕೂಡಾ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪುನೀತ್ ಕೆರೆಹಳ್ಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.
ಸೌಜನ್ಯ ಹೋರಾಟ ವಿಚಾರದಲ್ಲಿ ಪುನೀತ್ ಮತ್ತು ತಿಮರೋಡಿ ಮಧ್ಯೆ ಸಂಘರ್ಷ ಉಂಟಾಗಿದ್ದು, ಪುನೀತ್ ಕೆರೆಹಳ್ಳಿಗೆ ತಾಕತ್ತಿದ್ದರೆ ಉಜಿರೆ ಬರುವಂತೆ ತಿಮರೋಡಿ ಬಣ ಚಾಲೆಂಜ್ ಹಾಕಿದ್ದರು. ಅವರ ಸವಾಲು ಸ್ವೀಕರಿಸಿ ಉಜಿರೆಗೆ ಆಗಮಿಸಿದ್ದ ಪುನೀತ್ ಕೆರೆಹಳ್ಳಿ ಉಜಿರೆ ಪ್ರವೇಶಿಸೋ ದಾರಿ ಮಧ್ಯೆ ಬ್ಯಾರಿಕೇಡ್ ಹಾಕಿ ತಡೆದು ನಿರ್ಬಂಧ ನೊಟೀಸ್ ನೀಡಿ ಪೊಲೀಸರು ವಾಪಾಸ್ ಕಳುಹಿಸಿದ್ದಾರೆ.