ಜೈಪುರ : ವೈವಾಹಿಕ ವಂಚನೆಯ ಕುತೂಹಲಕಾರಿ ಪ್ರಕರಣವೊಂದರಲ್ಲಿ , ಕೇವಲ ಏಳು ತಿಂಗಳಲ್ಲಿ ವಿವಿಧ ರಾಜ್ಯಗಳಲ್ಲಿ 25 ವಿಭಿನ್ನ ಪುರುಷರನ್ನು ಮದುವೆಯಾದ 32 ವರ್ಷದ ಮಹಿಳೆಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಲೂಟಿಕೋರ ದುಲ್ಹನ್ ಎಂದೇ ಕುಖ್ಯಾತಿ ಪಡೆದಿರುವ ಆರೋಪಿ ಅನುರಾಧ ಪಾಸ್ವಾನ್‌ನನ್ನು ಸೋಮವಾರ ಭೋಪಾಲ್‌ನಲ್ಲಿ ಸವಾಯಿ ಮಾಧೋಪುರ್ ಪೊಲೀಸರು ಬಂಧಿಸಿದ್ದಾರೆ.
ಅನುರಾಧಾ ನಕಲಿ ಮದುವೆಯ ಮೋಸದ ಜಾಲದ ದೊಡ್ಡ ಗ್ಯಾಂಗ್‌ನ ಭಾಗವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಅವಳು ಮದುವೆಯಾಗಿ, ವರನ ಮನೆಯಲ್ಲಿದ್ದ ಹಣ, ಚಿನ್ನ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಕೆಲವೇ ದಿನಗಳಲ್ಲಿ ಓಡಿಹೋಗುತ್ತಿದ್ದಳು.
ಅನುರಾಧ ಬಡ ಕುಟುಂಬದವಳು. ಆಕೆಯ ಸಹೋದರರು ಕೂಡ ನಿರುದ್ಯೋಗಿ. ಆರ್ಥಿಕ ಸಂಕಷ್ಟದಿಂದಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ, ಅನುರಾಧ ವಂಚನೆ ದಾರಿ ಆಯ್ಕೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. 32 ವಯಸ್ಸಿನ ಈಕೆ ವಧುವಿನಂತೆ ನಟಿಸಿ ಅಮಾಯಕ ವರರನ್ನು ವಂಚಿಸುತ್ತಿದ್ದಳು.
ಗ್ಯಾಂಗ್ ಸದಸ್ಯರು ಈಕೆಯ ಫೋಟೋಗಳು ಮತ್ತು ಪ್ರೊಫೈಲ್‌ನ್ನು ವರರಿಗೆ ತೋರಿಸಿ ಮದುವೆಗೆ ಗೊತ್ತು ಮಾಡುತ್ತಿದ್ದರು. ನಂತರ ವಿವಾಹ ಒಪ್ಪಿಗೆ ಪತ್ರವನ್ನು ತಯಾರಿಸಲಾಗುತ್ತಿತ್ತು. ವಧು-ವರ ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ವಿಧಿವಿಧಾನಗಳ ಪ್ರಕಾರ ಮದುವೆಯಾಗುತ್ತಿದ್ದರು. ನಂತರ ಈಕೆಯ ಅಸಲಿ ಆಟ ಆರಂಭವಾಗುತ್ತಿತ್ತು.
ಗಂಡನ ಮನೆಯಲ್ಲಿ ಎಲ್ಲರೊಟ್ಟಿಗೂ ಮುಗ್ಧಳಂತೆ ವರ್ತಿಸಿ ಎಲ್ಲರನ್ನೂ ಮರುಳು ಮಾಡುತ್ತಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಆಹಾರದಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಪತಿ ಕುಟುಂಬದವರಿಗೆ ಕೊಡುತ್ತಿದ್ದಳು. ನಂತರ ಮನೆಯಲ್ಲಿ ನಗದು, ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದಳು. ಆದರೆ ಆ ಒಂದು ಮದುವೆ ಆಕೆ ಆಟಕ್ಕೆ ಪೂರ್ಣವಿರಾಮ ನೀಡಿತು.
ಹೌದು ಮೇ 3 ರಂದು ಸವಾಯಿ ಮಾಧೋಪುರದ ವಿಷ್ಣು ಶರ್ಮಾ ಎಂಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ ನಂತರ ಈ ವಂಚನೆ ಬೆಳಕಿಗೆ ಬಂದಿದೆ. ಸುನೀತಾ ಮತ್ತು ಪಪ್ಪು ಮೀನಾ ಎಂಬ ಇಬ್ಬರು ಏಜೆಂಟ್‌ಗಳಿಗೆ 2 ಲಕ್ಷ ರೂ.ಗಳನ್ನು ನೀಡಿದ್ದಾಗಿ ಅವರು ಹೇಳಿದ್ದರು. ಅವರು ದೂರುದಾರರಿಗೆ ಒಳ್ಳೆಯ ವಧುವನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿದ್ದರು. ಶರ್ಮಾ ಏಪ್ರಿಲ್ 20 ರಂದು ನ್ಯಾಯಾಲಯದಲ್ಲಿ ಅನುರಾಧಾಳನ್ನು ವಿವಾಹವಾದರು. ಆದರೆ ಕೇವಲ 12 ದಿನಗಳ ನಂತರ ಮೇ 2 ರಂದು ಅವಳು ಅಮೂಲ್ಯ ವಸ್ತುಗಳೊಂದಿಗೆ ನಾಪತ್ತೆಯಾಗಿದ್ದಳು.
ಶರ್ಮಾ ಅವರನ್ನು ಮದುವೆಯಾದ ನಂತರ ಅನುರಾಧಾ ಭೋಪಾಲ್‌ನಲ್ಲಿ ಗಬ್ಬರ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಅವನಿಂದ 2 ಲಕ್ಷ ರೂ.ಗಳನ್ನು ಪಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ಗ್ಯಾಂಗ್‌ನಲ್ಲಿ ಇತರರ ಹೆಸರುಗಳನ್ನು ಹೆಸರಿಸಿದ್ದಾರೆ, ರೋಶ್ನಿ, ರಘುಬೀರ್, ಗೋಲು, ಮಜ್‌ಬೂತ್ ಸಿಂಗ್ ಯಾದವ್ ಮತ್ತು ಅರ್ಜನ್, ಎಲ್ಲರೂ ಭೋಪಾಲ್‌ನವರು ಎನ್ನಲಾಗಿದೆ. ಪೊಲೀಸರು ವರನಂತೆ ನಟಿಸುತ್ತಿದ್ದ ಒಬ್ಬ ರಹಸ್ಯ ಕಾನ್‌ಸ್ಟೆಬಲ್‌ನನ್ನು ಕಳುಹಿಸಿದಾಗ ಅನುರಾಧಾ ಕೊನೆಗೂ ಸಿಕ್ಕಿಬಿದ್ದರು. ಏಜೆಂಟ್ ಆಕೆಯ ಫೋಟೋವನ್ನು ಹಂಚಿಕೊಂಡಾಗ, ಪೊಲೀಸರು ತಕ್ಷಣವೇ ಆಕೆಯನ್ನು ಬಂಧಿಸಿದರು.