ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್‌ನ ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ರಾಘವೇಂದ್ರ ಶ್ರೀನಿವಾಸ ಭಟ್ ಅವರನ್ನು ಬ್ಯಾಂಕ್ ಸೋಮವಾರ ನೇಮಿಸಿದೆ.
ವಿಶೇಷವೇನೆಂದರೆ ಶ್ರೀನಿವಾಸ ಭಟ್ಟ ಅವರು ಕರ್ನಾಟಕ ಬ್ಯಾಂಕ್ ಗೆ ಆರಂಭದಲ್ಲಿ ಕ್ಲರ್ಕ್ ಆಗಿ ಸೇರಿಕೊಂಡಿದ್ದರು. ಈಗ ಕ್ಲರ್ಕ್ ಆಗಿದ್ದ ವ್ಯಕ್ತಿ ಬ್ಯಾಂಕಿನ ಎಂಡಿ ಕೂಡ ಆಗಿರುವುದು ಹೆಮ್ಮೆ ಪಡುವ ವಿಚಾರವಾಗಿದೆ.
ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕೃಷ್ಣನ್ ಹರಿ ಹರ ಶರ್ಮಾ ಜೂನ್ 29 ರಂದು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದ ಬೆನ್ನಲ್ಲಿಯೇ ಬ್ಯಾಂಕ್‌ನ ಷೇರುಗಳಲ್ಲಿ ದೊಡ್ಡ ಮಟ್ಟದ ಕುಸಿತಕ್ಕೆ ಕಾರಣವಾಗಿತ್ತು. ಹೀಗಾಗಿ ಇದೀಗ ರಾಘವೇಂದ್ರ ಶ್ರೀನಿವಾಸ ಭಟ್ ಅವರನ್ನು ಎಂಡಿ ಹಾಗೂ ಸಿಇಓ ಆಗಿ ನೇಮಿಸಲಾಗಿದೆ. ಜುಲೈ 16 ರಿಂದ ಜಾರಿಗೆ ಬರುವದಂತೆ ಇವರನ್ನು ಮುಂದಿನ ಮೂರು ತಿಂಗಳ ಅವಧಿಗೆ ಮಧ್ಯಂತರ ಎಂಡಿ ಮತ್ತು ಸಿಇಒ ಆಗಿ ನೇಮಿಸಲಾಗಿದೆ. ಹೊಸಬರ ನೇಮಕವಾಗುವವರೆಗೆ ಅಥವಾ ಮೂರು ತಿಂಗಳವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಅವರು ಈ ಹುದ್ದೆಯಲ್ಲಿ ಇರುತ್ತಾರೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ರಾಘವೇಂದ್ರ ಭಟ್ ಅವರು 1981ರಲ್ಲಿ ಸಹಾಯಕರಾಗಿ ತಮ್ಮ ಬ್ಯಾಂಕ್ ವೃತ್ತಿಯನ್ನು ಆರಂಭಿಸಿದವರು. ಜುಲೈ 2ರಂದು ಸಿಒಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.
‘ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಆಗಿ ನೇಮಕಗೊಂಡಿದ್ದಕ್ಕೆ ಹೆಮ್ಮೆ ಎನಿಸಿದೆ. ಶತಮಾನಗಳ ನಂಬಿಕೆ ಹಾಗೂ ಅಭಿಮಾನವನ್ನು ಗಳಿಸಿರುವ ಬ್ಯಾಂಕ್‌ನ ಎಲ್ಲಾ ಪಾಲುದಾರರೊಂದಿಗೆ ಜತೆಗೂಡಿ ಬ್ಯಾಂಕ್ ಅನ್ನು ಇನ್ನಷ್ಟು ಬಲಿಷ್ಠಗೊಳಿಸುವ ಗುರಿ ಹೊಂದಿದ್ದೇನೆ’ ಎಂದಿದ್ದಾರೆ.


































