ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯ ರೈತರಿಗೆ ಬೆಳೆನಷ್ಟ ಪರಿಹಾರ ನೀಡುವಲ್ಲಿ ಸುಮಾರು ೪೯ ಕೋಟಿ ಹಣ ದುರುಪಯೋಗವಾಗಿದ್ದು, ಆಧಾರ ಲಿಂಕ್ ಇಲ್ಲದ ಬ್ಯಾಂಕ್‌ಗಳಿಗೆ ಹಣ ನೀಡಿ ಆನರ್ಹ ಫಲಾನುಭವಿಗಳಿಗೆ ಖಾತೆ ಸೇರಿದ್ದು, ನೈಜ್ಯ ರೈತರು ವಂಚಿತರಾಗಿದ್ಧಾರೆ. ದುರುಪಯೋಗ ಪಡಿಸಿಕೊಂಡವರು ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಅಧ್ಯಕ್ಷ ಟಿ.ರಘುಮೂರ್ತಿ ವಿಧಾನಸಭಾ ಅಧಿವೇಶನದಲ್ಲಿ ಒತ್ತಾಯಿಸಿದರು.
ಗುರುವಾರ ನಡೆದ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ೨೦೨೨-೨೩ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ಬೆಳೆ ನಷ್ಟಪರಿಹಾರದ ಹಣ ಆರ್ಹ ರೈತರಿಗೆ ದೊರಕಿಲ್ಲ, ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಧ್ಯವರ್ತಿಗಳ ಪ್ರಭಾವದಿಂದ ಈ ಹಣ ದುರುಪಯೋಗವಾಗಿದೆ. ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿ ಕನಿಷ್ಠ ಪಕ್ಷ ೧೦ ಕೋಟಿಯಂತೆ ಹಣ ದುರುಪಯೋಗವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಜಿಲ್ಲಾ ಮಟ್ಟದ ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ೪೯ ಕೋಟಿ ಹಣ ದುರುಪಯೋಗವಾಗಿದೆ ಎಂದು ಕಳೆದ ವರ್ಷ ವರದಿ ನೀಡಿದ್ದು ವರದಿಯನ್ನು ಸರ್ಕಾರಕ್ಕೆ ಕಳಿಸಲಾಗಿದೆ. ಆದರೆ, ಇದುವರೆಗೂ ಲೂಟಿ ಹೊಡೆದವರ ಬಗ್ಗೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ರೈತರಿಗೆ, ಸರ್ಕಾರಕ್ಕೆ ವಂಚಿಸಿದ ವ್ಯಕ್ತಿಗಳು ಯಾವುದೇ ಭಯವಿಲ್ಲದೆ, ನಿರ್ಭಯವಾಗಿ ಓಡಾಡಿಕೊಂಡಿದ್ಧಾರೆ. ಯಾವುದೇ ಕಾನೂನು ಭಯವಿಲ್ಲ, ಒಂದು ರೀತಿ ಲೂಟಿಹೊಡೆದವರ ಪರವಾಗಿ ಸರ್ಕಾರ ಇದೇ ಎಂಬ ಭಾವನೆ ಅವರಲ್ಲಿದೆ. ಇದು ಬೇಸರ ಸಂಗತಿಯಾಗಿದ್ದು, ಲೂಟಿ ಹೊಡೆದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ, ಶಾಸಕರ ಆರೋಪದ ಬಗ್ಗೆ ಈಗಾಗಲೇ ನಾನು ಚರ್ಚೆ ನಡೆಸಿ ಪ್ರಾದೇಶಿಕ ಆಯುಕ್ತರಿಗೆ ವರದಿಯನ್ನು ಕಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಪ್ರಕರಣಕ್ಕೆ ಸಂಬಂಧಪಟ್ಟ ತಾಲ್ಲೂಕಿನಲ್ಲಿ ಪ್ರಕರಣ ದಾಖಲಾಗಿದೆ. ಶಾಸಕರ ಆಗ್ರಹವನ್ನು ನಾನು ಒಪ್ಪುತ್ತೇನೆ. ಸರ್ಕಾರದ ಹಣಲೂಟಿ ಮಾಡಿದವರಿಗೆ ಶಿಕ್ಷೆಯಾಗಬೇಕು. ಯಾರೂ ಪಾರಾಗಲು ಸಾಧ್ಯವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದು ಒಟ್ಟು ೪೭.೯೯ ಕೋಟಿಹಣ ದುರುಪಯೋಗವಾಗಿದೆ. ದುರುಪಯೋಗ ಪಡಿಸಿಕೊಂಡವರ ಎಲ್ಲಾ ಮಾಹಿತಿ ಸರ್ಕಾರದ ಬಳಿ ಇದ್ದು ಕೂಡಲೇ ಕಾನೂನು ಕ್ರಮ ಜರುಗಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ನಾನು ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಇಂತಹ ಪ್ರಕರಣ ನಡೆಸಿದ್ದು ಅವುಗಳನ್ನು ತನಿಖೆ ವ್ಯಾಪಿಗೆ ಒಳಪಡಿಸಲಾಗುವುದು ಎಂದರು.