ಶಿಲ್ಲಾಂಗ್ : ಇಡೀ ದೇಶಾದ್ಯಂತ ವ್ಯಾಪಕ ಸದ್ದು ಮಾಡಿದ್ದ ಹನಿಮೂನ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದ ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡ ಸೊಹ್ರಾ ಸಬ್-ಡಿವಿಷನ್ನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯಕ್ಕೆ 790 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ದೋಷಾರೋಪ ಪಟ್ಟಿ ಸಲ್ಲಿಸಿರುವ ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡ ಇಂದೋರ್ ಮೂಲದ ಉದ್ಯಮಿ ರಾಜಾ ಪತ್ನಿ ಸೋನಂ ರಘುವಂಶಿಯೇ ಪ್ರಮುಖ ಆರೋಪಿ. ಜೊತೆಗೆ ಆಕೆಯ ಪ್ರಿಯಕರ ರಾಜ್ ಕುಶ್ವಾಹ ಸೇರಿ ಇತರ ಮೂವರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದೆ.
ಈಗಾಗಲೇ ಬಂಧಿಸಿರುವ ಸೋನಮ್ ರಘುವಂಶಿ, ರಾಜ್ ಕುಶ್ವಾಹ, ಆಕಾಶ್ ರಜಪೂತ್, ಆನಂದ್ ಕುರ್ಮಿ ಮತ್ತು ವಿಶಾಲ್ ಸಿಂಗ್ ಚೌಹಾಣ್ ಆರೋಪಿಗಳನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕಳೆದ ಮೇ 23ರಂದು ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದ ವೇಳೆ ಸೋನಮ್ ತನ್ನ ಪತಿಯನ್ನ ಕೊಲ್ಲಲು ಸಹಾಯ ಮಾಡಿದ್ದಾಗಿ ಆರೋಪಿಸಲಾಗಿದೆ.
ಎಲ್ಲ ಆರೋಪಿಗಳ ವಿರುದ್ಧ ಕೊಲೆಗಾಗಿ 103 (I), ಸಾಕ್ಷಿ ಕಣ್ಮರೆಗಾಗಿ 238 (a) ಹಾಗೂ ಕ್ರಿಮಿನಲ್ ಪಿತೂರಿಗಾಗಿ 61 (2) ಬಿಎನ್ಎಸ್ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿ ಎಫ್ಐಎಲ್ ವರದಿಗಳು ಬಂದ ನಂತರ ಇತರ ಮೂವರು ಆರೋಪಿಗಳ ವಿರುದ್ಧ ಪೂರಕ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಪೂರ್ವ ಖಾಸಿ ಹಿಲ್ಸ್ ಎಸ್ಪಿ ವಿವೇಕ್ ಸೈಮ್ ತಿಳಿಸಿದ್ದಾರೆ. ಅಲ್ಲದೇ ಸಾಕ್ಷ್ಯ ನಾಶ ಮತ್ತು ಮರೆಮಾಚುವ ಆರೋಪದ ಮೇಲೆ ಬಂಧಿಸಲ್ಪಟ್ಟ ಜೇಮ್ಸ್, ತೋಮರ್ ಮತ್ತು ಅಹಿರ್ಬರ್ಗೆ ಜಾಮೀನು ಮಂಜೂರಾಗಿದೆ. ಅವರ ಮೇಲೂ ನಿಗಾ ಇಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.