ದೆಹಲಿ : ಉದ್ಯಮಿ ಗೌತಮ್ ಅದಾನಿ ಅವರು ಎಂದಿಗೂ ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳುವುದಿಲ್ಲ. ನ್ಯಾಯಯುತವಾಗಿ ಅವರು ಜೈಲಿನಲ್ಲಿರಬೇಕು. ಆದರೆ ಕೇಂದ್ರ ಸರ್ಕಾರವೇ ಅದಾನಿ ಅವರನ್ನ ರಕ್ಷಣೆ ಮಾಡುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಅಧಿಕಾರಿಗಳು ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್‌ಗೂ ಅಧಿಕ ಲಂಚದ ಭರವಸೆ ನೀಡಿದ್ದಾರೆ ಎಂಬ ಆರೋಪವನ್ನು ಅದಾನಿ ಸಮೂಹ ತಳ್ಳಿಹಾಕಿದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಅದಾನಿ ಆರೋಪಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ನೀವು ಭಾವಿಸುತ್ತೀರಾ? ನಿಸ್ಸಂಶಯವಾಗಿ ಅವರು ಆರೋಪಗಳನ್ನು ನಿರಾಕರಿಸುತ್ತಾರೆ. ಹಾಗಾಗಿ ನಾವು ಹೇಳಿದಂತೆ ಅವರನ್ನು ಬಂಧಿಸಬೇಕು ಎಂದಿದ್ದಾರೆ.
ಸಣ್ಣ ಸಣ್ಣ ಆರೋಪದಲ್ಲಿ ನೂರಾರು ಜನರನ್ನು ಬಂಧಿಸಲಾಗುತ್ತಿದೆ. ಆದರೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾವಿರಾರು ಕೋಟಿ ರೂ.ಗಳ ಆರೋಪ ಹೊರಿಸಲ್ಪಟ್ಟಿದೆ. ನ್ಯಾಯಯುತವಾಗಿ ಅವರು ಜೈಲಿನಲ್ಲಿರಬೇಕು, ಆದ್ರೆ ಕೇಂದ್ರ ಸರ್ಕಾರವೇ ಅವರನ್ನು ರಕ್ಷಿಸುತ್ತಿದೆ ಎಂದು ಕಿಡಿಕಾರಿದ್ದಾರೆ.