ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ ಎಂದ ಹೇಳಿದ ಅವರು, “ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಮತ್ತು ನಮ್ಮ ಸಂಪೂರ್ಣ ಬೆಂಬಲ ಬೇಕು” ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಕಾಂಗ್ರೆಸ್‌ನ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ತಾರಿಕ್ ಕರ್ರಾ ಅವರೊಂದಿಗೆ ಮಾತನಾಡಿದ್ದೇನೆ ಎಂದರು.
“ಭಯೋತ್ಪಾದನೆಯ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಪೊಳ್ಳು ಹೇಳಿಕೆ ನೀಡುವ ಬದಲು, ಸರ್ಕಾರ ಈಗ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅನಾಗರಿಕ ಘಟನೆಗಳು ಸಂಭವಿಸದಂತೆ ಮತ್ತು ಅಮಾಯಕ ಭಾರತೀಯರು ಈ ರೀತಿ ಪ್ರಾಣ ಕಳೆದುಕೊಳ್ಳದಂತೆ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಅವರು ಹಿಂದಿಯಲ್ಲಿ ಟ್ವೀಟ್‌ನಲ್ಲಿ ಬರೆದಿದ್ದಾರೆ.
ದಾಳಿಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸೌದಿ ಅರೇಬಿಯಾ ಭೇಟಿಯನ್ನು ಮೊಟಕುಗೊಳಿಸಿ ಬುಧವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ತಮ್ಮ ಅಮೆರಿಕ ಮತ್ತು ಪೆರು ಭೇಟಿಯನ್ನು ಮೊಟಕುಗೊಳಿಸಿ ಭಾರತಕ್ಕೆ ಆದಷ್ಟು ಬೇಗ ಆಗಮಿಸಲಿದ್ದಾರೆ.
ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಬೈಸರನ್‌ನಲ್ಲಿ ನಡೆದ ದಾಳಿಯು 2019 ರ ಪುಲ್ವಾಮಾ ದಾಳಿಯ ನಂತರದ ಅತ್ಯಂತ ಮಾರಕವಾಗಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಭಯೋತ್ಪಾದಕ ಗುಂಪಿನ ಪ್ರತಿನಿಧಿಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಇದರ ಹೊಣೆಯನ್ನು ಹೊತ್ತಿದೆ.