ನವದೆಹಲಿ : ರೈಲುಗಳಲ್ಲಿ ನೀಡಲಾಗುವ ಹೊದಿಕೆಗಳನ್ನು ಎಷ್ಟು ದಿನಕ್ಕೊಮ್ಮೆ ತೊಳೆಯಲಾಗುತ್ತದೆ ಎಂಬ ಪ್ರಯಾಣಿಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ ಈ ಕುರಿತು ರೈಲ್ವೇ ಸಚಿವರೇ ಮಾಹಿತಿ ನೀಡಿದ್ದು, ರೈಲಿನಲ್ಲಿ ನೀಡಲಾಗುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ ಎಂದು ಹೇಳಿದ್ದಾರೆ. ಮೂಲ ನೈರ್ಮಲ್ಯ ಮಾನದಂಡಗಳನ್ನು ಪೂರೈಸುವ ಹಾಸಿಗೆಗಳಿಗೆ ಪ್ರಯಾಣಿಕರು ಪಾವತಿಸುತ್ತಿದ್ದರೂ, ಉಣ್ಣೆಯ ಹೊದಿಕೆಗಳನ್ನು ತಿಂಗಳಿಗೊಮ್ಮೆ ಮಾತ್ರ ತೊಳೆಯಲಾಗುತ್ತದೆಯೇ ಎಂಬ ಕಾಂಗ್ರೆಸ್ ಸಂಸದ ಕುಲದೀಪ್ ಇಂದೋರಾ ಪ್ರಶ್ನೆಗೆ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಉತ್ತರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರೈಲು ಪ್ರಯಾಣಿಕರಿಗೆ ನೀಡಲಾಗುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ತೊಳೆಯಲಾಗುತ್ತಿದೆ ಮತ್ತು ಹಾಸಿಗೆಯ ಹೊದಿಕೆಯಾಗಿ ಅದರ ಬಳಕೆಗಾಗಿ ಹೆಚ್ಚುವರಿ ಬೆಡ್‌ಶೀಟ್ ಅನ್ನು ಬೆಡರೋಲ್ ಕಿಟ್‌ನಲ್ಲಿ ನೀಡಲಾಗುತ್ತದೆ ಎಂದರು. ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಬಳಸಲಾಗುವ ಕಂಬಳಿಗಳು ಹಗುರವಾಗಿದ್ದು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತದೆ. ಜತೆಗೆ ಇದನ್ನು ಸುಲಭವಾಗಿ ತೊಳೆಯಬಹುದು ಎಂದು ಅಶ್ವಿನಿ ವೈಷ್ಣವ ಹೇಳಿದರು. ಹೊದಿಕೆಗಳನ್ನು ತೊಳೆಯಲು ಯಾಂತ್ರೀಕೃತ ಲಾಂಡ್ರಿ ವ್ಯವಸ್ಥೆ ಇದ್ದು, ಗುಣಮಟ್ಟದ ಯಂತ್ರಗಳ ಬಳಕೆ, ಬಟ್ಟೆ ತೊಳೆಯಲು ನಿರ್ದಿಷ್ಟ ರಾಸಾಯನಿಕಗಳ ಬಳಕೆ ಸೇರಿ ಪ್ರಯಾಣಿಕರ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
