ಬೆಂಗಳೂರು : ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡಗೆ ನಿಂದನೆ ಹಾಗೂ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ, ಕಳೆದ 14 ದಿನಗಳಿಂದ ಪೊಲೀಸರ ಕಣ್ತಪ್ಪಿಸಿಕೊಂಡಿದ್ದ ಆರೋಪಿ ರಾಜೀವ್ ಗೌಡನ ಬಂಧನವಾಗಿದೆ. ಇಂದು (ಜನವರಿ 26) ಕೇರಳ ಗಡಿಭಾಗದಲ್ಲಿ ಶಿಡ್ಲಘಟ್ಟ ಪೊಲೀಸರು ರಾಜೀವ್ ಗೌಡನನ್ನು ವಶಕ್ಕೆ ಪಡೆದಿದ್ದಾರೆ.
ಕಲ್ಟ್ ಸಿನಿಮಾದ ಬ್ಯಾನರ್ ತೆರವುಗೊಳಿಸಿದ್ದ ವಿಚಾರಕ್ಕೆ ಸಂಬಂಧಿಸಿ ಜನವರಿ 12ರಂದು ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡಗೆ ರಾಜೀವ್ ಗೌಡ ಧಮ್ಕಿ ಹಾಕಿದ್ದ. ಈ ಸಂಬಂಧ ಜನವರಿ 14ರಂದು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ರಾಜೀವ್ ಗೌಡ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಪರಾರಿಯಾಗಿದ್ದು, ಕಳೆದ ಎರಡು ವಾರಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ.
ಈ ನಡುವೆ ರಾಜೀವ್ ಗೌಡನ ವಿರುದ್ಧ ಕೆಪಿಸಿಸಿ ಶಿಸ್ತು ಸಮಿತಿ ಜನವರಿ 24ರಂದು ಅಮಾನತು ಆದೇಶ ಹೊರಡಿಸಿತ್ತು. ಅಲ್ಲದೆ, ತನ್ನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದರಿಂದ ಬಂಧನದ ಭೀತಿಯಲ್ಲಿದ್ದ ರಾಜೀವ್ ಗೌಡ, ಮಂಗಳೂರಿನಲ್ಲಿ ಶ್ರೀಮಂತ ಉದ್ಯಮಿಯೊಬ್ಬರ ಬಳಿ ಕಳೆದ ಮೂರು ದಿನಗಳಿಂದ ಆಶ್ರಯ ಪಡೆದಿದ್ದಾನೆ ಎಂಬ ಸ್ಫೋಟಕ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು.
ಪೊಲೀಸರ ಕಣ್ತಪ್ಪಿಸಲು ರಾಜೀವ್ ಗೌಡ ತನ್ನ ಕಾರನ್ನು ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿ, ಆಶ್ರಯ ನೀಡಿದ್ದ ಉದ್ಯಮಿಯ ಕಾರಿನಲ್ಲಿ ಕೇರಳದತ್ತ ಪರಾರಿಯಾಗಲು ಯತ್ನಿಸಿದ್ದಾನೆ. ತಲಪಾಡಿ ಮಾರ್ಗವಾಗಿ ಕಾಸರಗೋಡು ಕಡೆಗೆ ತೆರಳುತ್ತಿದ್ದ ವೇಳೆ, ಶಿಡ್ಲಘಟ್ಟ ಪೊಲೀಸ್ ವೃತ್ತ ನಿರೀಕ್ಷಕ ಆನಂದಕುಮಾರ್ ನೇತೃತ್ವದ ತಂಡ ಉದ್ಯಮಿಯ ಕಾರಿನ ಜಾಡು ಹಿಡಿದು ಕೇರಳ ಗಡಿಭಾಗದಲ್ಲೇ ರಾಜೀವ್ ಗೌಡನನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ಪ್ರಸ್ತುತ, ಆರೋಪಿಯನ್ನು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಗೆ ಕರೆತರುತ್ತಿದ್ದು, ಮುಂದಿನ ಕ್ರಮವಾಗಿ ಚಿಂತಾಮಣಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡರಿಂದ ಒಂದು ದೂರು, ಶಾಸಕ ರವಿಕುಮಾರ್ ಪರವಾಗಿ ಮತ್ತೊಂದು ದೂರು ಹಾಗೂ ಬೆದರಿಕೆ ಪತ್ರ ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ರಾಜೀವ್ ಗೌಡ ಬಂಧನಕ್ಕೆ ವ್ಯಾಪಕ ಒತ್ತಾಯ ವ್ಯಕ್ತವಾಗಿತ್ತು.

































