ಬೆಂಗಳೂರು : ಏರ್ ಶೋ ಮೂಲಕ ಮತ್ತೊಂದು ಕುಂಭ ಶುರುವಾದಂತಿದೆ. ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳ ಸಂಸ್ಕೃತಿ ಬಗ್ಗೆ ತೋರಿಸಿದ್ರೆ, ಏರ್ ಶೋ ಭಾರತದ ರಕ್ಷಣಾ ಬಲಿಷ್ಠತೆಯನ್ನ ಜಗತ್ತಿಗೆ ಸಾರುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಯಲಹಂಕ ವಾಯುನೆಲೆಯಲ್ಲಿ ದೇಶದ ೧೫ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ 2025’ಕ್ಕೆ ರಾಜನಾಥ್ ಸಿಂಗ್ ಚಾಲನೆ ನೀಡಿದರು. ಚಾಲನೆ ನೀಡಿದ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ, ಉತ್ಪಾದನೆಯ ಬಗ್ಗೆ ಭಾರತ ಕೇಂದ್ರೀಕೃತವಾಗಿದೆ. ಏರ್ ಶೋ ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಸಂಬಂಧ – ಬಾಂಧವ್ಯಗಳನ್ನ ಅಭಿವೃದ್ಧಿಗೊಳಿಸುತ್ತದೆ ಎಂದರು.
ದೇಶ-ವಿದೇಶಗಳ ವಾಯುಪಡೆಯ ಅಧಿಕಾರಿಗಳು ಇಲ್ಲಿದ್ದಾರೆ. ಭಾರತದ ಜೊತೆ ಈ ಅಧಿಕಾರಿಗಳ ಸಹಭಾಗಿತ್ವ ಮುಖ್ಯವಾಗಿದೆ. ಈ ಸಂಬಂಧ ವೃದ್ಧಿಯಾದ್ರೆ ಜಗತ್ತಿನಲ್ಲಿ ಬಲಿಷ್ಠರಾಗುತ್ತೇವೆ. ಡಿಜಿಟಲ್, ಸ್ಟಾರ್ಟ್ ಆಪ್, ಕೈಗಾರಿಕೋದ್ಯಮ, ನವೋಧ್ಯಮದಲ್ಲಿ ಭಾರತ ಪ್ರಗತಿ ಹೊಂದುತ್ತಿದೆ. ಅದರಂತೆ ರಕ್ಷಣಾ ವಲಯ ಬಲಿಷ್ಠವಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೇಶ – ವಿದೇಶಗಳ ಪ್ರಮುಖ ನಾಯಕರು, ರಕ್ಷಣಾ ವಿಭಾಗದ ಅಧಿಕಾರಿಗಳು ಏರ್ ಶೋನಲ್ಲಿ ಭಾಗಿಯಾಗಿದ್ದರು. ಜೊತೆಗೆ ಈ ಸಂದರ್ಭ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಉಪಸ್ಥಿತರಿದ್ದರು.