ಚಂಡೀಗಢ,: ಭಾರತೀಯ ವಾಯುಸೇನೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಮಿಗ್-21 ಯುದ್ಧ ವಿಮಾನ ಹಲವಾರು ವೀರ ಕಾರ್ಯಗಳಿಗೆ ಸಾಕ್ಷಿಯಾಗಿದೆ.
1971ರ ಯುದ್ಧ, ಕಾರ್ಗಿಲ್ ಯುದ್ಧ, ಬಾಲಕೋಟ್ ವೈಮಾನಿಕ ದಾಳಿ ಮತ್ತು ಆಪರೇಷನ್ ಸಿಂಧೂರದಲ್ಲಿಯೂ ಸಹ ಫೈಟರ್ ಜೆಟ್ ನಿರ್ಣಾಯಕ ಪಾತ್ರ ವಹಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮಿಗ್-21 ದೇಶದ ನೆನಪುಗಳು ಮತ್ತು ಭಾವನೆಗಳಲ್ಲಿ ಆಳವಾಗಿ ಹುದುಗಿದೆ. 1963ರಲ್ಲಿ ಸೇನೆಗೆ ಸೇರ್ಪಡೆಯಾದಾಗಿನಿಂದ ಈ ವಿಮಾನವು ಆರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದೆ. ನಮಗೆಲ್ಲರಿಗೂ ಇದು ಕೇವಲ ಫೈಟರ್ ಜೆಟ್ ಅಲ್ಲ, ಬದಲಾಗಿ ನಾವು ಆಳವಾದ ಬಾಂಧವ್ಯ ಹೊಂದಿರುವ ಕುಟುಂಬ ಸದಸ್ಯ.
ಮಿಗ್-21 ನಮ್ಮ ವಿಶ್ವಾಸವನ್ನು ರೂಪಿಸಿದೆ, ನಮ್ಮ ಕಾರ್ಯತಂತ್ರವನ್ನು ಬಲಪಡಿಸಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ನಮ್ಮನ್ನು ನಾವು ಸ್ಥಾಪಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಶ್ಲಾಘಿಸಿದರು.