ಚಿತ್ರದುರ್ಗ : ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು. ಪ್ರತಿಯೊಬ್ಬರ ದಿನನಿತ್ಯದ ಬದುಕಿನಲ್ಲಿ ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಅಭಿಮಾನವಿರಬೇಕೆಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ತಿಳಿಸಿದರು.
ಮೆಜಿಸ್ಟಿಕ್ ವೃತ್ತದ ಸಮೀಪವಿರುವ ಶ್ರಮಿಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾಪಡೆ ವತಿಯಿಂದ ಶುಕ್ರವಾರ ನಡೆದ 69 ಕನ್ನಡ ರಾಜ್ಯೋತ್ಸವ, ಉಚಿತ ಆರೋಗ್ಯ ತಪಾಸಣೆ ಹಾಗೂ ಗಿಡನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶರಣರು, ಸಂತರು, ಮಹಾತ್ಮರು, ತಪಸ್ವಿಗಳು, ಪುಣ್ಯ ಪುರುಷರು ಹುಟ್ಟಿರುವ ಈ ನೆಲದಲ್ಲಿ ನಾವುಗಳೆಲ್ಲಾ ಜನ್ಮತಾಳಿರುವುದೇ ಪುಣ್ಯ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ. ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಪ್ರೀತಿಸಿ ಗೌರವಿಸಬೇಕು. ಕೆಂಪು ಧೈರ್ಯ ಹಾಗೂ ಹಳದಿ ಶಾಂತಿಯ ಸಂಕೇತ. ಕನ್ನಡ ಭಾಷೆಗೆ ಎಲ್ಲಾ ಜಾತಿ ಧರ್ಮದವರನ್ನು ಪ್ರೀತಿಸುವ ತಾಯಿ ಹೃದಯವಿದೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಮಾತನಾಡಿ ಕಟ್ಟಡ ಕಟ್ಟುವ ಕಾರ್ಮಿಕರು ಶ್ರಮಪಟ್ಟು ದುಡಿಯುವುದರಿಂದ ಆರೋಗ್ಯದ ಕಡೆಗೂ ಹೆಚ್ಚಿನ ಕಾಳಜಿ ವಹಿಸಬೇಕು.
ಹಾಲು, ಮೊಟ್ಟೆ, ತರಕಾರಿ, ಹಣ್ಣು ಹಂಪಲು ಇನ್ನಿತರೆ ಪೌಷ್ಠಿಕಾಂಶ ಆಹಾರಗಳನ್ನು ಸೇವಿಸಬೇಕು. ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ದತಿಯಿಂದ ಎಲ್ಲರೂ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುವುದು ಸಹಜ. ಉಚಿತ ಆರೋಗ್ಯ ಶಿಬಿರಗಳಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಸಲಾಗುವುದು. ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲಾಸ್ಪತ್ರೆಯಲ್ಲಿ ಈಗ ಎಲ್ಲಾ ರೀತಿಯ ಸೌಲಭ್ಯಗಳು ಬಡ ರೋಗಿಗಳಿಗೆ ಸಿಗುತ್ತದೆ ಎಂದು ಹೇಳಿದರು.
ಮದ್ಯಪಾನ, ಧೂಮಪಾನ ಆರೋಗ್ಯಕ್ಕೆ ಹಾನಿಕರ, ಗುಟ್ಕ, ಪಾನ್ಪರಾಗ್ನಿಂದ ಕ್ಯಾನ್ಸರ್ನಂತ ಕೆಟ್ಟ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಅದಕ್ಕಾಗಿ ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕಟ್ಟಡ ಕಾರ್ಮಿಕರಲ್ಲಿ ಡಾ.ರವೀಂದ್ರ ವಿನಂತಿಸಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ
ನಗರಸಭೆ ಪೌರಾಯುಕ್ತೆ ರೇಣುಕ, ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಎ.ಜಾಕಿರ್ಹುಸೇನ್, ಎ.ಸಾಧಿಕ್ವುಲ್ಲಾ, ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾಪಡೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್(ಪಾರ್ಥ) ಕಾರ್ಯದರ್ಶಿ ಕೆ.ಶಿವಕುಮಾರ್, ಜಿಲ್ಲಾಧ್ಯಕ್ಷ ರವಿಚಂದ್ರ ಉಪಾಧ್ಯಕ್ಷ ಕೃಷ್ಣಮೂರ್ತಿ, ರತ್ನಮ್ಮ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ತಾಲ್ಲೂಕು ಅಧ್ಯಕ್ಷೆ ಅಮೀನಾಭಿ, ಜಂಟಿ ಕಾರ್ಯದರ್ಶಿ ಪರ್ವಿನ್ ಸೇರಿದಂತೆ ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಹೆಚ್.ಪ್ಯಾರೆಜಾನ್, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.