ಬೆಂಗಳೂರು : ಬರೋಬ್ಬರಿ 48 ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ತಮಗೆ ಅಶ್ಲೀಲ ಮೆಸೇಜ್ ಬಂದಿರುವುದಾಗಿ ನಟಿ ರಮ್ಯಾ ದೂರು ನೀಡಿದ್ದು, ಅಶ್ಲೀಲ ಮೆಸೇಜ್ ಕಳುಹಿಸಿದವರಿಗೆ ಶಿಕ್ಷೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಟ ದರ್ಶನ್‌ಗೆ ಸಿಕ್ಕಿರೋ ಜಾಮೀನು ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ್ದ ಅಭಿಪ್ರಾಯವನ್ನು ನಟಿ ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸುಪ್ರೀಂ ಕೋರ್ಟ್‌ನಿಂದ ಸಾಮಾನ್ಯರಿಗೆ ನ್ಯಾಯ ಸಿಗುತ್ತೆ ಅಂತ ನಂಬಿದ್ದು ನಿಜವಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಗೆ ಸಂಬಂಧಿಸಿದಂತೆ ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಇದರ ಬೆನ್ನಲ್ಲೇ ರಮ್ಯಾ ಆ ಮೆಸೇಜ್ ಗಳನ್ನು ಸ್ಕ್ರೀನ್ ಶಾಟ್ ತೆಗೆದು ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಸುಮಾರು 48 ಅಕೌಂಟ್‌ನಿಂದ ಬಂದಿದ್ದ ಅಶ್ಲೀಲ ಸಂದೇಶದ ವಿಚಾರವಾಗಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಆ ರೀತಿಯ ಸಂದೇಶ ಕಳುಹಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ನೀಡಿದ್ದಾರೆ. ಅವರಿಗೆ ಶಿಕ್ಷೆಯಾಗುವ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ತಲುಪಬೇಕು ಎಂದು ತಿಳಿಸಿದ್ದಾರೆ.
ದರ್ಶನ್ ವಿರುದ್ಧದ ಕೊಲೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇತ್ತು. ಕೋರ್ಟ್ ಕಲಾಪಗಳನ್ನು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಮಾಜಿ ಸಂಸದೆಯಾಗಿ ವಿವಿಧ ಸುದ್ದಿ ವರದಿಯನ್ನು ಹಂಚಿಕೊಂಡಿದ್ದೆ. ಸುಪ್ರೀಂಕೋರ್ಟ್ ಕಾರ್ಯಕಲಾಪದ ವರದಿಯನ್ನ ಹಂಚಿಕೊಂಡಿದ್ದೆ. ಆ ಕಾರಣಕ್ಕಾಗಿ ವಿವಿಧ ಖಾತೆಗಳಿಂದ ಅಸಹ್ಯಕರ ಸಂದೇಶ, ಭಯಾನಕವಾಗಿ ಅವಹೇಳನಕಾರಿ ಸಂದೇಶಗಳನ್ನ ಕಳುಹಿಸಿದ್ದರು. ನನಗೆ ಕಳುಹಿಸಲಾದ ಸಂದೇಶಗಳು ಸ್ತ್ರೀದ್ವೇಷದಿಂದ ಕೂಡಿದ್ದವು. ಅವುಗಳನ್ನ ದೂರಿನಲ್ಲಿ ಉಲ್ಲೇಖಿಸಲು ಸಹ ಸಾಧ್ಯವಾಗ್ತಿಲ್ಲ. ದೂರಿನೊಂದಿಗೆ ಸಂದೇಶಗಳ ಲಿಂಕ್‌ಗಳನ್ನ ಲಗತ್ತಿಸುತ್ತಿದ್ದೇನೆ. ದರ್ಶನ್ ಅಭಿಮಾನಿಗಳ ಪೋಸ್ಟ್ ಅತಿರೇಖವಾಗಿದೆ. ಅವರು ಬಳಸಿರುವ ಭಾಷೆ ಅಶ್ಲೀಲ ಮತ್ತು ಕೊಳಕು, ನನ್ನ ಜೀವಕ್ಕೆ ನೇರ ಬೆದರಿಕೆಯೊಡ್ಡಿವೆ. ದುಷ್ಕರ್ಮಿಗಳ ವಿರುದ್ಧ ಅತ್ಯಂತ ಕಠಿಣಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ರಮ್ಯಾ ಉಲ್ಲೇಖಿಸಿದ್ದಾರೆ.