ರಾಮನಗರ : ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಯಾವುದೇ ನಷ್ಟವಾಗಿಲ್ಲ. ಶಕ್ತಿ ಯೋಜನೆಯಿಂದ ಬರಬೇಕಾದ ಹಣ ಸಾರಿಗೆ ಇಲಾಖೆಗೆ ಬಂದಿದೆ ಎಂದು ರಾಮನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 8.8 ಕೋಟಿಗೂ ಹೆಚ್ಚು ಹಣ ಸಾರಿಗೆ ಇಲಾಖೆಗೆ ಬಂದಿದೆ. ಕೆಎಸ್ಆರ್ಟಿಸಿಯಲ್ಲಿ ಬಿಜೆಪಿ ಸರ್ಕಾರವಿದ್ದಾಗ 5,900 ಕೋಟಿ ಸಾಲ ಇತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 10 ಸಾವಿರ ಮಂದಿಯನ್ನು ಕೆಎಸ್ಆರ್ಟಿಸಿಗೆ ನೇಮಕ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಮುಂದುವರೆದು ಈಗಾಗಲೇ ಡಿ.ಕೆ. ಶಿವಕುಮಾರ್ ಹಾಗೂ ಸುರೇಶ್ ರಾಮನಗರ ಜಿಲ್ಲೆಯನ್ನ ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. ರಾಮನಗರ ಜಿಲ್ಲೆಗೆ ಈ ಬಾರಿಯ ಬಜೆಟ್ನಲ್ಲಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದೇವೆ. ಜಿಲ್ಲೆಗೆ ಆಗಬೇಕಿರುವ ಅಭಿವೃದ್ಧಿ ಪಟ್ಟಿಯನ್ನು ಜಿಲ್ಲಾಧಿಕಾರಿ ಅವರು ಕೊಡುತ್ತಾರೆ. ಫೆ. 4 ರಂದು ಪ್ರಗತಿ ಪರಿಶೀಲನಾ ಸಭೆ ಕರೆದಿದ್ದೇನೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಸಿಎಂ ಬಳಿ ಮಾತನಾಡುತ್ತೇನೆ ಎಂದು ಮಾಹಿತಿ ನೀಡಿದರು.
ಇನ್ನು ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಆದರೆ ಆಸೆ ಇಟ್ಟುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯರನ್ನೇ ಕೇಳಿ ಎಂದರು.