ಬೆಳಗಾವಿ : ಯಾವ ಸಚಿವರಿಗೂ, ಯಾವ ವ್ಯಕ್ತಿಗೂ ನೋಟಿಸ್ ನೀಡುವುದಿಲ್ಲ. ಯಾವ ಸಚಿವರಿಗೂ ಯಾವ ನಾಯಕರಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ಏರ್ಪೋರ್ಟ್ನಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿ ಸಚಿವ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ನೀಡಿದೆ ಎಂಬ ವದಂತಿಗಳನ್ನು ಅವರು ಅಲ್ಲಗಳೆದಿದ್ದಾರೆ. ನೋಟಿಸ್ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರು ಈ ರೀತಿ ವದಂತಿಗಳನ್ನೆಲ್ಲ ಹಬ್ಬಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.
ಕಾಂಗ್ರೆಸ್ ಆಂತರಿಕ ಸಂಘರ್ಷ ಸಂಬಂಧಿತ ವದಂತಿಗಳನ್ನು ಬಿಜೆಪಿ ನಾಯಕರು ಹರಡುತ್ತಿದ್ದಾರೆ. ಬಿಜೆಪಿ ಪ್ರಾಯೋಜಿತ ಆಧಾರರಹಿತ ಮಾತುಗಳ ಮೇಲೆ ವಿಶ್ವಾಸವಿಡಬೇಡಿ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷರ ಬದಲಾವಣೆ ಮಾಡುತ್ತಿದ್ದರೆ ಇಲ್ಲೇಕೆ ಬರುತ್ತಿದ್ದರು ಎಂದು ಪ್ರಶ್ನಿಸಿದರು.