ಬೆಂಗಳೂರು : ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಲು ಕನ್ನಡ ಮೂಲದ ಕೆಲ ನಟಿಯರನ್ನ ಸಂಪರ್ಕಿಸಲಾಗಿತ್ತು. ಅವರು ಸಿಗದ ಕಾರಣ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದರು.
ನಟಿ ತಮನ್ನಾ ಭಾಟಿಯಾಗೆ ಕನ್ನಡಪರ ಸಂಘಟನೆಗಳಿಂದ ವಿರೋಧ ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾತಾಡಿದ ಅವರು, ರಾಯಭಾರಿ ಆಯ್ಕೆಗೆ ಒಂದು ಸಮಿತಿ ರಚಿಸಲಾಗಿತ್ತು. ಕನ್ನಡಿಗರನ್ನೇ ನಾವು ಮೊದಲು ಸಂಪರ್ಕಿಸಿದ್ದೇವೆ. ಆದ್ರೆ ಅವರು ಯಾರೂ ಫ್ರೀ ಇರಲಿಲ್ಲ ಎಂದರು.
ರಶ್ಮಿಕಾ ಮಂದಣ್ಣ ಅವರನ್ನೂ ಕೇಳಿದ್ದೇವೆ. ಅವರು ಬೇರೆ ಕಡೆ ಸೈನ್ ಮಾಡಿದ್ದೇನೆ ಆಗಲ್ಲ ಹೇಳಿದ್ರು. ನಟಿ ಶ್ರೀಲೀಲಾ ಅವರನ್ನು ಸಂಪರ್ಕಿಸಿದ್ದೇವೆ, ಅವ್ರೂ ಆಗಲ್ಲ ಅಂದಿದ್ರು. ಬಳಿಕ ಪೂಜಾ ಹೆಗಡೆ, ಕಿಯಾರಾ ಅಡ್ವಾಣಿ ಅವರೂ ಆಗೋದಿಲ್ಲ ಬೇರೆ ಪ್ರಾಜೆಕ್ಟ್ ಒಪ್ಪಿಕೊಂಡಿದ್ದೇನೆ ಅಂತಾ ಹೇಳಿದ್ರು. ದೀಪಿಕಾ ಪಡುಕೋಣೆ ನಮ್ಮ ಬಜೆಟ್‌ಗೆ ಎಟುಕದವರು, ಹಾಗಾಗಿ ಅವರನ್ನು ಸಂಪರ್ಕ ಮಾಡಿಲ್ಲ. ಕೊನೆಯದಾಗಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.
ಇನ್ನು ಯಾರೇ ರಾಯಭಾರಿ ಆದರೂ 2 ವರ್ಷ ಲಾಕ್ ಆಗ್ತಾರೆ. ಇದರಲ್ಲಿ ಕನ್ನಡಕ್ಕೆ ಅವಮಾನ ಮಾಡಬೇಕು ಎಂಬ ಉದ್ದೇಶ ಇಲ್ಲ. ಇದು ಬಿಸಿನೆಸ್, ಸ್ಪರ್ಧೆ ಜಾಸ್ತಿ. ಕನ್ನಡದ ಅಸ್ಮಿತೆ, ಕನ್ನಡದ ಕಲಾವಿದರ ಬಗ್ಗೆ ಬದ್ಧತೆ, ಗೌರವ ಇದೆ. ಯಾರೂ ವಿವಾದ ಮಾಡಬಾರದು. ನಮ್ಮದು ಪ್ಯಾನ್ ಇಂಡಿಯಾ ಬಿಸಿನೆಸ್, ಈಗ ವಿದೇಶಕ್ಕೂ ಬಿಸಿನೆಸ್ ಒಯ್ಯಬೇಕೆಂಬ ಯೋಜನೆ ಇದೆ ಎಂದು ವಿವರಿಸಿದರು.