ಬೆಂಗಳೂರು : ರೇಷನ್ ಕಾರ್ಡ್ ತಿದ್ದುಪಡಿ ಅಂತಿಮ ಗಡುವನ್ನು ಸರಕಾರ ಒಂದು ತಿಂಗಳು ವಿಸ್ತರಣೆ ಮಾಡಿದೆ. ರೇಷನ್ ಕಾರ್ಡ್ ತಿದ್ದುಪಡಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಇನ್ನೂ ಅನೇಕ ಕಾರ್ಡ್ಗಳ ತಿದ್ದುಪಡಿ ಬಾಕಿ ಇರುವುದರಿಂದ ಜ.31ರ ತನಕ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈ ಮೊದಲು ರೇಷನ್ ಕಾರ್ಡ್ ತಿದ್ದುಪಡಿಗೆ ಡಿ.31 ಅಂತಿಮ ಗಡುವು ನೀಡಿತ್ತು. ಆದರೆ ತಿದ್ದಪಡಿಯಲ್ಲೇ ಸಾಕಷ್ಟು ಗೊಂದಲಗಳಿದ್ದು, ಇನ್ನೂ ಸಾವಿರಾರು ತಿದ್ದುಪಡಿ ಬಾಕಿಯುಳಿದಿದೆ. ಈ ಹಿನ್ನೆಲೆಯಲ್ಲಿ ಜ.31ರ ತನಕ ತಿದ್ದುಪಡಿ ದಿನಾಂಕ ಮುಂದುವರಿಸಲಾಗಿದೆ.
ಪಡಿತರ ಚೀಟಿಯಲ್ಲಿ ಮನೆ ಯಜಮಾನರ ಹೆಸರು ಬದಲಾವಣೆ, ಹೆಸರು ಸೇರಿಸುವುದು, ಹೆಸರು ಸರಿಪಡಿಸಿಕೊಳ್ಳುವುದು, ಹೆಸರು ತೆಗೆಯುವುದು, ಫೋಟೊ ಬದಲಾವಣೆ ಮಾಡುವುದು ಹಾಗೂ ನ್ಯಾಯಬೆಲೆ ಅಂಗಡಿಯನ್ನು ಬದಲಾಯಿಸಿಕೊಳ್ಳುವುದಕ್ಕೆ ಅವಕಾಶ ಕೊಡಲಾಗಿದೆ. ತಿದ್ದುಪಡಿ ಮಾಡಿಸಲು ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಅಥವಾ ಆದಾಯ ಪ್ರಮಾಣಪತ್ರ ನೀಡಬೇಕಾಗುತ್ತದೆ. ಆರು ವರ್ಷದ ಒಳಗಿನ ಮಕ್ಕಳಿದ್ದರೆ, ಜನನ ಪ್ರಮಾಣಪತ್ರ ದಾಖಲೆ ಸಲ್ಲಿಸಿ ರೇಷನ್ ಕಾರ್ಡ್ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ. ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
				
															
                    
                    
                    
                    































